ಚಾಂಗ್‌ಝೂ : 2026ರ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ತಾರೆ ಪಿ.ವಿ. ಸಿಂಧು ಹಾಗೂ ಯುವ ಆಟಗಾರ ಆಯುಷ್ ಶೆಟ್ಟಿ ಶುಭಾರಂಭ ಮಾಡಿದ್ದು, ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 15ನೇ ಶ್ರೇಯಾಂಕದ ಪಿ.ವಿ. ಸಿಂಧು ತಮ್ಮದೇ ದೇಶದ ಸಹ ಆಟಗಾರ್ತಿ ಉನ್ನತಿ ಹೂಡಾ ವಿರುದ್ಧ 21-14, 9-21, 21-10 ಗೇಮ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದರು. ಒಂದು ಗಂಟೆ ಕಾಲ ನಡೆದ ಈ ಪಂದ್ಯವನ್ನು ಗೆಲ್ಲುವ ಮೂಲಕ ಸಿಂಧು ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಜಪಾನ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದ ಸಿಂಧು, ಮುಂದಿನ ಸುತ್ತಿನಲ್ಲಿ ಚೀನಾದ 4ನೇ ಶ್ರೇಯಾಂಕದ ಚೆನ್ ಯು ಫೀ ಅವರನ್ನು ಎದುರಿಸಲಿದ್ದಾರೆ. ಚೆನ್ ಅವರು ಮಂಗಳವಾರ ನಡೆದ ಪಂದ್ಯದಲ್ಲಿ ನಟ್ಸುಕಿ ನಿಡೈರಾರನ್ನು ಮಣಿಸಿದ್ದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಶಟ್ಲರ್ ಆಯುಷ್ ಶೆಟ್ಟಿ, ಇಂಡೋನೇಷ್ಯಾದ ವಿಶ್ವ ನಂ. 11 ಆಟಗಾರ ಹಾಗೂ ಮಾಜಿ ಜೂನಿಯರ್ ಚಾಂಪಿಯನ್ ಅಲ್ವಿ ಫರ್ಹಾನ್ ಅವರಿಗೆ ಶಾಕ್ ನೀಡಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆಯುಷ್ 21-17, 5-21, 21-17 ಗೇಮ್‌ಗಳಿಂದ ಫರ್ಹಾನ್ ಅವರನ್ನು ಮಣಿಸಿ ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. 2023ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಫರ್ಹಾನ್ ವಿರುದ್ಧ ಸೋತಿದ್ದ ಆಯುಷ್, ಇದೀಗ ಆ ಸೋಲಿಗೆ ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ, ಡಬಲ್ಸ್ ವಿಭಾಗದಲ್ಲಿ ಭಾರತೀಯ ಆಟಗಾರರಿಗೆ ಕಠಿಣ ಸವಾಲು ಎದುರಾಯಿತು. ಭಾರತದ ರೋಹನ್ ಕಪೂರ್ ಹಾಗೂ ರುತ್ವಿಕಾ ಶಿವಾನಿ ಜೋಡಿಯು ಅಗ್ರ ಶ್ರೇಯಾಂಕದ ಯಾನ್ ಯು ಫೆಂಗ್ ಮತ್ತು ಡಾಂಗ್ ಪಿಂಗ್ ಹ್ಯಾಂಗ್ ವಿರುದ್ಧ 9-21, 16-21 ಅಂತರದಿಂದ ಸೋಲನುಭವಿಸಿತು. ಹಾಗೆಯೇ ಧ್ರುವ ಕಪಿಲ ಮತ್ತು ತನಿಷಾ ಕ್ರಾಸ್ಟೋ ಜೋಡಿಯು ಚೀನಾದ ಕಿನ್ ವಾ ಗುಯೊ ಹಾಗೂ ಫಾಂಗ್ ಹುಯಿ ಚೆನ್ ವಿರುದ್ಧ 18-21, 18-21 ನೇರ ಗೇಮ್‌ಗಳಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದೆ.