ಹೈದರಬಾದ್ : ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಪಂದ್ಯದ ಪಾವಿತ್ರ್ಯತೆ, ಶಿಸ್ತು ಮತ್ತು ತಾಂತ್ರಿಕ ನಿಖರತೆಯನ್ನು ಹೆಚ್ಚಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅತ್ಯಂತ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಮುಂಬರುವ ೨೦೨೬-೨೭ರ ದೇಶಿಯ ಕ್ರಿಕೆಟ್ ಸೀಸನ್‌ನಿಂದ, ಅಂದರೆ ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಿಂದಲೇ ಈ ನಿಯಮಗಳು ಜಾರಿಗೆ ಬರಲಿವೆ. ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಶಿಫಾರಸುಗಳ ಆಧಾರದ ಮೇಲೆ ಈ ಬದಲಾವಣೆಗಳನ್ನು ಮಾಡಲಾಗಿದ್ದು, ಬೌಲರ್‌ಗಳು ಹಾಗೂ ತಂಡಗಳ ಲೋಪದೋಷಗಳಿಗೆ ಇನ್ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ.
ಹೊಸ ನಿಯಮಾವಳಿಗಳ ಪ್ರಕಾರ, ಯಾವುದೇ ಬೌಲರ್ ಉದ್ದೇಶಪೂರ್ವಕವಾಗಿ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ (ಡೇಂಜರಸ್ ಫುಲ್ ಟಾಸ್) ಎಸೆದರೆ, ಅವರನ್ನು ಆ ನಿರ್ದಿಷ್ಟ ಇನ್ನಿಂಗ್ಸ್ ಮಾತ್ರವಲ್ಲದೆ ಇಡೀ ಪಂದ್ಯದಿಂದಲೇ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗುತ್ತದೆ. ಈ ಎಸೆತವು ಉದ್ದೇಶಪೂರ್ವಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕು ಆನ್-ಫೀಲ್ಡ್ ಅಂಪೈರ್‌ಗಳಿಗಿರುತ್ತದೆ. ಇದರ ಜೊತೆಗೆ ಬಹುದಿನಗಳ ಪಂದ್ಯಗಳಲ್ಲಿ ದಿನದ ಕೊನೆಯ ಓವರ್ ನಡೆಯುತ್ತಿರುವಾಗ ವಿಕೆಟ್ ಬಿದ್ದರೂ ಸಹ, ಸ್ಟಂಪ್ಸ್ ಘೋಷಿಸದೆ ಆ ಓವರ್ ಅನ್ನು ಕಡ್ಡಾಯವಾಗಿ ಪೂರ್ತಿಯಾಗಿ ಮುಗಿಸಬೇಕಾಗುತ್ತದೆ. ಇನ್ನು ಪಂದ್ಯಗಳಲ್ಲಿ ಕೃತಕ ಅಥವಾ ಮೊದಲೇ ನಿರ್ಧರಿಸಿದ ಫಲಿತಾಂಶ ತರಲು ಕೊನೆಯ ಇನ್ನಿಂಗ್ಸ್ ಡಿಕ್ಲೇರ್ ಮಾಡುವುದಕ್ಕೆ ಅಥವಾ ಬಿಟ್ಟುಕೊಡುವುದಕ್ಕೆ ಬಿಸಿಸಿಐ ಸಂಪೂರ್ಣ ತಡೆ ನೀಡಿದೆ.
ವಿಕೆಟ್ ಕೀಪಿಂಗ್‌ನಲ್ಲಿದ್ದ ಹಳೆಯ ಕಠಿಣ ನಿಬಂಧನೆಗಳನ್ನು ಸಡಿಲಗೊಳಿಸಲಾಗಿದ್ದು, ಬೌಲರ್ ರನ್-ಅಪ್ ವೇಳೆಯಲ್ಲಿ ವಿಕೆಟ್ ಕೀಪರ್ ಕದಲಬಹುದು ಹಾಗೂ ಚೆಂಡು ಹಿಡಿಯುವಾಗ ಮಾತ್ರ ಗ್ಲೌಸ್ ವಿಕೆಟ್ ಹಿಂಭಾಗದಲ್ಲಿರಬೇಕು ಎಂಬ ನಿಯಮ ರೂಪಿಸಲಾಗಿದೆ. ದೇಶಿಯ ಏಕದಿನ ಪಂದ್ಯಗಳ ಸ್ಟ್ರಾಟಜಿಕ್ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಹೆಡ್ ಕೋಚ್‌ಗಳು ಮೈದಾನದೊಳಗೆ ಬಂದು ಆಟಗಾರರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ವೈಡ್ ಬಾಲ್ ನಿರ್ಧಾರಗಳನ್ನು ನಿಖರವಾಗಿ ತೆಗೆದುಕೊಳ್ಳಲು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಲೆಗ್ ಸೈಡ್‌ನಲ್ಲಿ ಪ್ರತ್ಯೇಕವಾದ ಗೆರೆಯನ್ನು ಪೇಂಟ್ ಮಾಡಲಾಗುತ್ತದೆ.
ಇದಲ್ಲದೆ, ಕೇವಲ ಚೆಂಡು ಕೈತಪ್ಪಿ ಹೋದರೆ ಅದು ಓವರ್ ಥ್ರೋ ಆಗುವುದಿಲ್ಲ; ರನೌಟ್ ಮಾಡಲು ಅಥವಾ ರನ್ ತಡೆಯಲು ಎಸೆದಿದ್ದಾಗ ಮಾತ್ರ ಓವರ್ ಥ್ರೋ ಎಂದು ಪರಿಗಣಿಸಲಾಗುತ್ತದೆ. ಚೆಂಡು ಫೀಲ್ಡರ್ ಕೈಗೆ ಸಿಕ್ಕಿ ಚಲನೆ ನಿಂತ ತಕ್ಷಣ ಅಂಪೈರ್ ‘ಡೆಡ್ ಬಾಲ್’ ಘೋಷಿಸಬಹುದು. ಬೌಲರ್ ಚೆಂಡು ಎಸೆಯುವ ಕ್ಷಣದಲ್ಲಿ ಎಲ್ಲಾ ಫೀಲ್ಡರ್‌ಗಳು ಕಡ್ಡಾಯವಾಗಿ ಬೌಂಡರಿ ಗೆರೆಯ ಒಳಗೇ ಇರಬೇಕಿದ್ದು, ಗೆರೆ ದಾಟಿ ಓಡಿ ಬಂದು ಫೀಲ್ಡಿಂಗ್ ಮಾಡುವಂತಿಲ್ಲ. ಹಾಗೆಯೇ ಬ್ಯಾಟರ್ ಕ್ಯಾಚ್‌ಗೆ ಅಡ್ಡಬಂದು ಔಟ್ ಆದಾಗ ಕ್ರೀಸ್‌ನಲ್ಲಿ ಉಳಿಯುವ ಇನ್ನೊಬ್ಬ ಬ್ಯಾಟರ್ ಮುಂದಿನ ಎಸೆತವನ್ನು ಎದುರಿಸಬೇಕೇ (ಸ್ಟ್ರೈಕ್ ತಗೋಬೇಕೇ) ಅಥವಾ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಇರಬೇಕೇ ಎಂಬುದನ್ನು ಫೀಲ್ಡಿಂಗ್ ತಂಡದ ನಾಯಕನೇ ನಿರ್ಧರಿಸಲಿದ್ದಾರೆ. ಈ ಎಲ್ಲಾ ನೂತನ ತಿದ್ದುಪಡಿಗಳು ದೇಶಿ ಕ್ರಿಕೆಟ್‌ನಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲಿವೆ.