image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಏಷ್ಯನ್ ಗೇಮ್ಸ್‌ಗೆ ಸಜ್ಜಾಗಲು ಭಾರತೀಯ ಶೂಟರ್‌ಗಳಿಗೆ ಅಂತಿಮ ಪರೀಕ್ಷೆ

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಏಷ್ಯನ್ ಗೇಮ್ಸ್‌ಗೆ ಸಜ್ಜಾಗಲು ಭಾರತೀಯ ಶೂಟರ್‌ಗಳಿಗೆ ಅಂತಿಮ ಪರೀಕ್ಷೆ

ಹ್ಯಾಂಗ್‌ಝೌ : ಚೀನಾದ ಹ್ಯಾಂಗ್‌ಝೌನಲ್ಲಿ ಬುಧವಾರದಿಂದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಆರಂಭವಾಗಲಿದ್ದು, ಸದ್ಯದಲ್ಲೇ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ಭಾರತದ ಶೂಟರ್‌ಗಳಿಗೆ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿ ನೋಡಿಕೊಳ್ಳಲು ಇದು ಕೊನೆಯ ಅವಕಾಶವಾಗಲಿದೆ. ಅಂತರರಾಷ್ಟ್ರೀಯ ಶೂಟಿಂಗ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಆತಿಥೇಯ ಚೀನಾ ವಿರುದ್ಧ ಭಾರತೀಯ ತಂಡದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ. ಚೀನಾದಲ್ಲಿ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 14ರವರೆಗೆ ನಡೆಯಲಿದೆ.

ಸ್ಪೇನ್‌ನ ಗ್ರನಡಾದಲ್ಲಿ ನಡೆದ ಇತ್ತೀಚಿನ ಆಲ್ರೌಂಡ್ ಶೂಟಿಂಗ್ ವಿಶ್ವಕಪ್‌ನಲ್ಲಿ ಚೀನಾ ತಂಡವು ಎಂಟು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡು, ರೈಫಲ್ ಹಾಗೂ ಪಿಸ್ತೂಲ್ ವಿಭಾಗಗಳಲ್ಲಿ ತನ್ನ ಪ್ರಬಲ ಶಕ್ತಿಯನ್ನು ಪ್ರದರ್ಶಿಸಿತ್ತು. ಆ ವಿಶ್ವಕಪ್‌ನಲ್ಲಿ ಭಾರತವು ಬಲವಾದ ತಂಡವನ್ನು ಕಣಕ್ಕಿಳಿಸಿದರೂ ಕೇವಲ ಒಂದು ಚಿನ್ನದ ಪದಕದೊಂದಿಗೆ ಹಿಂತಿರುಗಿತ್ತು. ಆದರೆ, ಬಾಕುನಲ್ಲಿ ನಡೆದ ಇತ್ತೀಚಿನ ಎರಡನೇ ವಿಶ್ವಕಪ್‌ನಲ್ಲಿ ಭಾರತ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಗೆದ್ದು ಆಶಾಭಾವ ಮೂಡಿಸಿತ್ತು. ಇದರಲ್ಲಿ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಸುರುಚಿ ಸಿಂಗ್ ಹಾಗೂ 25 ಮೀಟರ್ ಪಿಸ್ತೂಲ್‌ನಲ್ಲಿ ಇಶಾ ಸಿಂಗ್ ಸ್ವರ್ಣ ಸಾಧನೆ ಮಾಡಿದ್ದರು.

ಏಷ್ಯನ್ ಗೇಮ್ಸ್ ಅಭಿಯಾನ ಆರಂಭಿಸುವ ಮೊದಲು ತಮ್ಮ ಸ್ಥಿರತೆಯನ್ನು ಕಾಯ್ದುಕೊಂಡು ಚಿನ್ನದ ಪದಕ ಗೆಲ್ಲುವ ಗುರಿಯನ್ನು ಸುರುಚಿ ಮತ್ತು ಇಶಾ ಹೊಂದಿದ್ದಾರೆ. ಜೊತೆಗೆ ಒಲಿಂಪಿಕ್ ಅವಳಿ ಪದಕ ವಿಜೇತೆ ಮನು ಭಾಕರ್ ಅವರೂ 10 ಮೀಟರ್ ಏರ್ ಪಿಸ್ತೂಲ್ ಹಾಗೂ 25 ಮೀಟರ್ ಪಿಸ್ತೂಲ್ ಎರಡೂ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಇನ್ನೊಂದೆಡೆ, ಈ ನಾಲ್ಕು ದಿನಗಳ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ವೈಯಕ್ತಿಕ ವಿಶ್ವಕಪ್ ಚಿನ್ನದ ಪದಕದ ಕಾಯುವಿಕೆಯನ್ನು ಕೊನೆಗೊಳಿಸಲು ಭಾರತದ ಪುರುಷ ಶೂಟರ್‌ಗಳು ಉತ್ಸುಕರಾಗಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ಅವರು 10 ಮೀಟರ್ ಏರ್ ರೈಫಲ್‌ನಲ್ಲಿ ಮತ್ತೆ ತಮ್ಮ ಲಯವನ್ನು ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ವಿಜೇತ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಅವರು 50 ಮೀಟರ್ ರೈಫಲ್ 3 ಪೊಸಿಷನ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದರೆ, ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಅನೀಶ್ ಭಾನ್ವಾಲಾ ಅವರು 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.

Category
ಕರಾವಳಿ ತರಂಗಿಣಿ