ಅಮೇರಿಕ : ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳು ಜಂಟಿಯಾಗಿ ಆಯೋಜಿಸಿದ್ದ ಫಿಫಾ ವಿಶ್ವಕಪ್-2026 ಟೂರ್ನಿಯು ಮುಕ್ತಾಯಗೊಂಡಿದ್ದು, ಫುಟ್‌ಬಾಲ್ ಜಗತ್ತಿಗೆ ಹೊಸ ಚಾಂಪಿಯನ್ ಸಿಕ್ಕಿದೆ. ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಬಲ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿದ ಸ್ಪೇನ್, ಜಾಗತಿಕ ಫುಟ್‌ಬಾಲ್ ಸಾಮ್ರಾಜ್ಯದ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಜಯದೊಂದಿಗೆ ಸ್ಪೇನ್ ತಂಡವು ಕ್ರೀಡಾ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತದ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಅಂತರರಾಷ್ಟ್ರೀಯ ಫುಟ್‌ಬಾಲ್ ಒಕ್ಕೂಟ (ಫಿಫಾ) ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು ₹7,280 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಇದರಲ್ಲಿ ತಂಡಗಳ ಪ್ರದರ್ಶನ ಆಧಾರಿತ ನಗದು ಬಹುಮಾನದ ಮೊತ್ತವೇ ಬರೋಬ್ಬರಿ ₹5,469 ಕೋಟಿ ಆಗಿದೆ. ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್ ತಂಡವು 50 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ ₹482 ಕೋಟಿ ನಗದನ್ನು ಪಡೆದುಕೊಂಡಿದೆ. ರನ್ನರ್ ಅಪ್ ಪ್ರಶಸ್ತಿ ಪಡೆದ ಅರ್ಜೆಂಟೀನಾ ತಂಡ ಕೂಡ ₹317 ಕೋಟಿ ($33 ಮಿಲಿಯನ್) ಹಣವನ್ನು ತನ್ನದಾಗಿಸಿಕೊಂಡಿದೆ.
ಇನ್ನುಳಿದಂತೆ, ಫ್ರಾನ್ಸ್ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದ ಬಲಿಷ್ಠ ಇಂಗ್ಲೆಂಡ್ ತಂಡವು ₹279 ಕೋಟಿ ($29 ಮಿಲಿಯನ್) ಪಡೆದುಕೊಂಡರೆ, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಫ್ರಾನ್ಸ್ ₹259 ಕೋಟಿ ($27 ಮಿಲಿಯನ್) ಗಳಿಸಿದೆ. ಅಷ್ಟೇ ಅಲ್ಲದೆ, ಐದರಿಂದ ಎಂಟನೇ ಸ್ಥಾನ ಪಡೆಯುವ ಪ್ರತೀ ತಂಡಕ್ಕೂ ತಲಾ ₹182 ಕೋಟಿ ($19 ಮಿಲಿಯನ್) ಬಹುಮಾನ ದೊರೆಯಲಿದೆ. 2022ರ ಕತಾರ್ ವಿಶ್ವಕಪ್‌ಗೆ ಹೋಲಿಸಿದರೆ, ಈ ಬಾರಿಯ ಒಟ್ಟು ಬಹುಮಾನದ ನಿಧಿಯಲ್ಲಿ ಶೇಕಡಾ 50ರಷ್ಟು ಭಾರಿ ಹೆಚ್ಚಳ ಮಾಡಲಾಗಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ₹405 ಕೋಟಿ ಪಡೆದಿತ್ತು. ಆದರೆ ಈ ಬಾರಿ ಚಾಂಪಿಯನ್ ಆದ ಸ್ಪೇನ್ ತಂಡವು ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.