ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಟೀಂ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನೊಳಗೊಂಡಿರುವ ಕಿವೀಸ್ ತಂಡವನ್ನ ಯಾವುದೇ ಹಂತದಲ್ಲಿಯೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪ್ರತಿ ಎದುರಾಳಿಯಂತೆಯೇ ಕಿವೀಸ್ ಸಹ ಒಂದು ವಿಭಿನ್ನ ಸವಾಲಿನ ಎದುರಾಳಿ ಎಂದು ಅವರು ತಿಳಿಸಿದ್ದಾರೆ.
"ನಮಗೆ ಪ್ರತೀ ಎದುರಾಳಿ ತಂಡವೂ ಸಹ ಒಂದೇ, ಎದುರಾಳಿಗಳ ಕುರಿತು ನಮಗೆ ಯಾವುದೇ ಭಯವಿಲ್ಲ. ಆದರೆ ನಾವು ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲಿ ಪಂದ್ಯದ ಗತಿಯನ್ನ ಬದಲಿಸಬಲ್ಲ ಅನೇಕ ಆಟಗಾರರನ್ನ ನ್ಯೂಜಿಲೆಂಡ್ ತಂಡ ಒಳಗೊಂಡಿದೆ. ಟಾಸ್ ಫಲಿತಾಂಶ ಏನೇ ಇದ್ದರೂ ನಾವು ಪಂದ್ಯದ ಮೊದಲ ಎಸೆತದಿಂದಲೇ ಎಚ್ಚರಿಕೆಯಿಂದ ಆಡಲಿದ್ದೇವೆ ಹಾಗೂ ಗೆಲುವಿನ ಕಡೆ ಗಮನ ಹರಿಸಲಿದ್ದೇವೆ" ಎಂದು ಅವರು ತಿಳಿಸಿದರು.
ಕಳೆದೊಂದು ದಶಕದಲ್ಲಿ ಟೆಸ್ಟ್ ಮಾದರಿಯಲ್ಲಿ ಬ್ಯಾಟರ್ಸ್‌ಗಳಿಗಿಂತಲೂ ಹೆಚ್ಚಾಗಿ ಬೌಲರ್‌ಗಳು ಪಂದ್ಯದ ಗತಿಯನ್ನ ಬದಲಿಸುತ್ತಿದ್ದಾರೆ. ಬ್ಯಾಟರ್ ಒಬ್ಬ 1 ಸಾವಿರ ರನ್ ಗಳಿಸಿದರೂ ಸಹ ಟೆಸ್ಟ್ ಪಂದ್ಯದ ಗೆಲುವು ಖಚಿತವಿರುವುದಿಲ್ಲ. ಆದರೆ ಬೌಲರ್ ಓರ್ವ ಹೆಚ್ಚು ವಿಕೆಟ್ ಪಡೆದರೆ ಪಂದ್ಯದ ಗೆಲುವು ಭಾಗಶಃ ಖಚಿತವಾಗುತ್ತದೆ. ಇತ್ತೀಚಿಗೆ ಬಾಂಗ್ಲಾದೇಶ ವಿರುದ್ಧ ನಡೆದ ಮಳೆ ಬಾಧಿತ ಟೆಸ್ಟ್ ಪಂದ್ಯದ ಫಲಿತಾಂಶವೇ ಇದಕ್ಕೊಂದು ಉದಾಹರಣೆಯಾಗಿದೆ. ಟೆಸ್ಟ್ ಮಾತ್ರವಲ್ಲ, ಮೂರೂ ಮಾದರಿಯಲ್ಲಿಯೂ ಬೌಲರ್‌ಗಳು ಮ್ಯಾಚ್ ವಿನ್ನರ್‌ಗಳಾಗಿ ಹೊರಹೊಮ್ಮುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಟರ್ಸ್ ಕೇಂದ್ರಿತವಾದ ನಮ್ಮ ಮೈಂಡ್ ಸೆಟ್ ಬದಲಾಗಬಹುದು ಎಂಬ ನಿರೀಕ್ಷೆಯಿದೆ ಎಂದು ಟೀಂ ಇಂಡಿಯಾ ಕೋಚ್ ಅಭಿಪ್ರಾಯ ವ್ಯಕ್ತಪಡಿಸಿದರು.