ಲಂಡನ್ : ಲಂಡನ್‌ನಲ್ಲಿ ನಡೆದ ಮಹಿಳಾ ಡಬಲ್ಸ್‌ನ ರೋಚಕ ಫೈನಲ್ ಪಂದ್ಯದಲ್ಲಿ ಚೀನಾದ ಗುವೊ ಹನ್ಯು ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಕ್ ಜೋಡಿಯು ಅದ್ಭುತ ಪ್ರದರ್ಶನ ನೀಡಿತು. ಟೂರ್ನಿಯಲ್ಲಿ 10ನೇ ಶ್ರೇಯಾಂಕ ಹೊಂದಿದ್ದ ಕ್ರಿಸ್ಟಿನಾ-ಗುವೋ ಜೋಡಿಯು ಎರಡನೇ ಶ್ರೇಯಾಂಕದ ಬಲಿಷ್ಠ ಗೇಬ್ರಿಯೆಲಾ ಡಬ್ರೋವ್ಸ್ಕಿ ಮತ್ತು ಲೂಯಿಸಾ ಸ್ಟೆಫಾನಿ ಸವಾಲನ್ನು 6-3, 7-5 ನೇರ ಸೆಟ್‌ಗಳಿಂದ ಧೂಳೀಪಟ ಮಾಡಿತು. ಪಂದ್ಯದ ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಸಾಧಿಸಿದ ಈ ಜೋಡಿಯು ಕೇವಲ ಒಂದು ಗಂಟೆ 32 ನಿಮಿಷಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಇದು ಇವರಿಬ್ಬರು ಜೊತೆಯಾಗಿ ಜಯಿಸಿದ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದೆ. ಈಗಾಗಲೇ ಮಹಿಳಾ ಡಬಲ್ಸ್ ವಿಭಾಗದಲ್ಲಿ 6 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿರುವ 33 ವರ್ಷದ ಅನುಭವಿ ಕ್ರಿಸ್ಟಿನಾಗೆ ಇದು ವಿಂಬಲ್ಡನ್ನಲ್ಲಿ ಒಲಿದ ಮೊದಲ ಕಿರೀಟವಾದರೆ, ಗುವೊ ಪಾಲಿಗೆ ಇದು ವೃತ್ತಿಜೀವನದ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿ ಮೂಡಿಬಂದಿದೆ.
ಮತ್ತೊಂದೆಡೆ, ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯವೂ ಅಷ್ಟೇ ರೋಚಕತೆಯಿಂದ ಕೂಡಿತ್ತು. ಬ್ರಿಟನ್ನ ಹೆನ್ರಿ ಪ್ಯಾಟನ್ ಮತ್ತು ಫಿನ್ಲೆಂಡ್ನ ಹ್ಯಾರಿ ಹೆಲಿಯೋವಾರಾ ಜೋಡಿಯು ಅದ್ಭುತ ಹೊಂದಾಣಿಕೆಯ ಆಟ ಪ್ರದರ್ಶಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಎಲ್ ಸಾಲ್ವಡಾರ್ನ ಮಾರ್ಸೆಲೊ ಅರೆವಾಲೋ ಮತ್ತು ಕ್ರೊಯೇಷಿಯಾದ ಮೇಟ್ ಪಾವಿಕ್ ಜೋಡಿಯ ವಿರುದ್ಧ ತೀವ್ರ ಹೋರಾಟ ನಡೆಸಿದ ಪ್ಯಾಟನ್-ಹೆಲಿಯೋವಾರಾ ಜೋಡಿಯು 7-6, 7-6 ನೇರ ಸೆಟ್ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಕ್ಕಿತು.