ಹೈದರಾಬಾದ್ : ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ 39 ವರ್ಷ ವಯಸ್ಸಿನಲ್ಲೂ ಯುವ ಆಟಗಾರರನ್ನು ನಾಚಿಸುವಂತಹ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿರುವ ಜೊಕೊವಿಚ್, ಇದೀಗ ತಮ್ಮ ವಿಶೇಷ ಹೇಳಿಕೆಯ ಮೂಲಕ ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಟೆನಿಸ್ ಅಂಗಳದಲ್ಲಿ ಹಲವು ದಾಖಲೆ ಬರೆದಿರುವ ಜೊಕೊವಿಚ್, ತಮ್ಮ ಕ್ರಿಕೆಟ್ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ನೆರವು ಕೇಳಿದ್ದಾರೆ. ಮಾತ್ರವಲ್ಲದೆ ಕಿಂಗ್ ಕೊಹ್ಲಿಯನ್ನು ಜಾಗತಿಕ ತಾರೆ ಎಂದು ಹಾಡಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಜೊಕೊವಿಚ್ ಅವರ ಈ ಹೇಳಿಕೆಯನ್ನು ವಿಂಬಲ್ಡನ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. 'ವಿರಾಟ್ ಕೊಹ್ಲಿ ಜಾಗತಿಕ ತಾರೆ, ವಿಶೇಷವಾಗಿ ಭಾರತದಲ್ಲಿ ಅವರ ಜನಪ್ರಿಯತೆಗೆ ಸಾಟಿಯೇ ಇಲ್ಲ. ಕಳೆದ 10-15 ವರ್ಷಗಳಿಂದ ನಾನು ಕ್ರಿಕೆಟ್ ಆಟದ ಬಗ್ಗೆ ಬಹಳಷ್ಟು ಕಲಿಯುತ್ತಿದ್ದೇನೆ. ನಾನಿನ್ನೂ ನನ್ನ ಕ್ರಿಕೆಟ್ ಕೌಶಲ್ಯಗಳ ಮೇಲೆ ಕೆಲಸ ಮಾಡಬೇಕಾಗಿದೆ, ಆದ್ದರಿಂದ ವಿರಾಟ್ ಕೊಹ್ಲಿ ನನ್ನ ಬ್ಯಾಟ್ ಸ್ವಿಂಗ್ ತಂತ್ರಕ್ಕೆ ಸಹಾಯ ಮಾಡಬಹುದು ಎಂದು ಭಾವಿಸಿದ್ದೇನೆ. ಕೊಹ್ಲಿ ಬಗ್ಗೆ ನನಗೆ ಅಪಾರ ಗೌರವ ಮತ್ತು ಮೆಚ್ಚುಗೆ ಇದೆ' ಎಂದು ಜೊಕೊವಿಚ್ ಹೇಳಿಕೊಂಡಿದ್ದಾರೆ. ಜೊಕೊವಿಚ್ ಅವರ ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದು, 'ನಾನು ಕೆಲವು ಸಮಯದಿಂದ ನೊವಾಕ್ ಜೊಕೊವಿಚ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾವು ಮೆಸೇಜ್‌ಗಳ ಮೂಲಕ ಆಗಾಗ್ಗೆ ಮಾತನಾಡುತ್ತಿರುತ್ತೇವೆ. ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಜೊಕೊವಿಚ್ ಸಮಯ ಮಾಡಿಕೊಂಡು ನನ್ನೊಂದಿಗೆ ಸಂಪರ್ಕದಲ್ಲಿರುವುದು ನನ್ನ ಅದೃಷ್ಟ' ಎಂದು ಬರೆದುಕೊಂಡಿದ್ದಾರೆ.
ಮತ್ತೊಂದೆಡೆ ವಿಂಬಲ್ಡನ್ ಅಂಗಳದಲ್ಲಿ ಅಬ್ಬರಿಸುತ್ತಿರುವ ಜೊಕೊವಿಚ್, ಅತ್ಯಂತ ರೋಮಾಂಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮ್ ಅವರನ್ನು 7-6 (12/10), 3-6, 6-3, 6-7 (4/7), 7-6 (10/4) ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಬರೋಬ್ಬರಿ 5 ಗಂಟೆ 15 ನಿಮಿಷಗಳ ಕಾಲ ನಡೆದ ಈ ಮ್ಯಾರಥಾನ್ ಪಂದ್ಯವು ವಿಂಬಲ್ಡನ್ ಇತಿಹಾಸದಲ್ಲೇ ಸುದೀರ್ಘ ಅವಧಿಯ ಕ್ವಾರ್ಟರ್ ಫೈನಲ್ ಪಂದ್ಯ ಎಂಬ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಇದೀಗ ಮತ್ತೊಂದು ಗ್ರಾಂಡ್ ಸ್ಲಾಮ್ ಗೆಲುವಿನ ಸನಿಹದಲ್ಲಿರುವ ಜೊಕೊವಿಚ್, ಸೆಮಿಫೈನಲ್‌ನಲ್ಲಿ ಜಾನಿಕ್ ಸಿನ್ನರ್ ಸವಾಲನ್ನು ಎದುರಿಸಲಿದ್ದಾರೆ.