ತೆಲಂಗಾಣ : ಸಂಜು ಸ್ಯಾಮ್ಸನ್ (111) ಸಿಡಿಲಬ್ಬರದ ಶತಕ ಹಾಗೂ ನಾಯಕ ಸೂರ್ಯ ಕುಮಾರ್ ಯಾದವ್ (75) ಭರ್ಜರಿ ಆಟದೆದುರು ಬಾಂಗ್ಲಾದೇಶ ತಂಡ ಧೂಳೀಪಟವಾಯಿತು. ಮೂರನೇ ಟಿ20 ಪಂದ್ಯದಲ್ಲಿ ದಾಖಲೆಯ ಮೊತ್ತ ಪೇರಿಸಿದ ಭಾರತ, 133 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಸರಣಿಯನ್ನು 3-0 ಕ್ಲೀನ್ ಸ್ವೀಪ್ ಮಾಡಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. ಭಾರಿ ನಿರೀಕ್ಷೆ ಹೊಂದಿದ್ದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 4 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಬಳಿಕ ಒಂದಾದ ಸಂಜು ಸ್ಯಾಮ್ಸನ್ ಹಾಗೂ ಸೂರ್ಯ ಕುಮಾರ್ ಯಾದವ್ ಬಾಂಗ್ಲಾ ಬೌಲರ್ಗಳ ಮೇಲೆ ದಂಡೆತ್ತಿ ಹೋದರು. ಈ ಜೋಡಿ ಎರಡನೇ ವಿಕೆಟ್ಗೆ ದಾಖಲೆಯ 173 ರನ್ ಸೇರಿಸಿತು.
ಕೇವಲ 47 ಎಸೆತಗಳಲ್ಲಿ ಅಬ್ಬರದ 111 ರನ್ ಚಚ್ಚಿದ ಸಂಜು ಸ್ಯಾಮ್ಸನ್ ಮೊದಲ ಶತಕ ದಾಖಲಿಸಿ ಸಂಭ್ರಮಿಸಿದರು. ಸ್ಯಾಮ್ಸನ್ ಬ್ಯಾಟಿಂಗ್ ಎದುರು ಬಾಂಗ್ಲಾ ಬೌಲರ್ಗಳು ಕಂಗಾಲಾದರು. ಅದರಲ್ಲೂ, ಸ್ಪಿನ್ನರ್ ರಿಷದ್ ಹೊಸೇನ್ ಓವರ್ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಸಂಜು, ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರ್ಪಡಿಸಿದರು. 8 ಸಿಕ್ಸರ್ ಹಾಗೂ 11 ಬೌಂಡರಿ ಬಾರಿಸಿದ ಸ್ಯಾಮ್ಸನ್, ಮೊದಲ ಬಾರಿಗೆ ಆರಂಭಿಕರಾಗಿ ಮಿಂಚಿದರು.
ಸಂಜು ಜೊತೆ ಎಂದಿನಂತೆ ಆಕ್ರಮಣಕಾರಿ ಬ್ಯಾಟಿಂಗ್ ಸೂರ್ಯ ಕುಮಾರ್, 35 ಬಾಲ್ಗೆ 75 ರನ್ ಬಾರಿಸಿದರು. ಅವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ಗಳು ಸೇರಿದ್ದವು. ಈ ಇಬ್ಬರ ಬ್ಯಾಟಿಂಗ್ ಅಬ್ಬರದ ಹಿನ್ನೆಲೆಯಲ್ಲಿ ಭಾರತ ತಂಡ ಸರಾಸರಿ 14ಕ್ಕೂ ಅಧಿಕ ದರದಲ್ಲಿ ಪ್ರತಿ ಓವರ್ಗೆ ರನ್ ಗಳಿಸಿತು. ಇವರಿಬ್ಬರ ವಿಕೆಟ್ ಪತನದ ಬಳಿಕ, ಹಾರ್ದಿಕ್ ಪಾಂಡ್ಯ 47 ಹಾಗೂ ರಿಯಾನ್ ಪರಾಗ್ ಅಜೇಯ 34 ರನ್ ಸಿಡಿಸಿ ತಂಡದ ಮೊತ್ತವನ್ನು ಮುನ್ನೂರರ ಸಮೀಪ ಕೊಂಡೊಯ್ದರು. 20 ಓವರ್ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 297 ರನ್ ಕಲೆ ಹಾಕಿತು.
ಬಳಿಕ ಬೃಹತ್ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ ನಿರೀಕ್ಷೆಯಂತೆಯೇ ಗೆಲುವಿನ ಸಮೀಪವೂ ತಲುಪಲಾಗಲಿಲ್ಲ. ತೋವ್ಹಿದ್ ಹೃದೋಯ್ (63) ಅರ್ಧಶತಕ ಗಳಿಸಿದರೆ, ವಿಕೆಟ್ ಕೀಪರ್ ಲಿಟನ್ ದಾಸ್ 42 ರನ್ ಬಾರಿಸಿದರು. ಇನ್ನುಳಿದಂತೆ, ನಾಯಕ ನಜ್ಮುಲ್ ಹೊಸೇನ್ ಶಾಂಟೋ (14) ಸೇರಿ ಯಾರೂ ಕೂಡ ಹೋರಾಟದ ಆಟ ಪ್ರದರ್ಶಿಸಲಿಲ್ಲ. 20 ಓವರ್ಗಳಲ್ಲಿ 7 ವಿಕೆಟ್ಗೆ 164 ರನ್ ಗಳಿಸಿದ ಬಾಂಗ್ಲಾ ತಂಡ, 133 ರನ್‌ಗಳ ಸೋಲಿಗೆ ಶರಣಾಯಿತು.