image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀಶಾಂತ್‌ ಮೇಲಿದ್ದ ನಿಷೇಧ ಹಿಂಪಡೆದ ಕೆಸಿಎ

ಶ್ರೀಶಾಂತ್‌ ಮೇಲಿದ್ದ ನಿಷೇಧ ಹಿಂಪಡೆದ ಕೆಸಿಎ

ಹೈದರಾಬಾದ್ : ಟೀಂ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರ ಮೇಲಿದ್ದ ಮೂರು ವರ್ಷಗಳ ನಿಷೇಧವನ್ನು ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಅಧಿಕೃತವಾಗಿ ಹಿಂಪಡೆದಿದೆ. ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸುವ ಭರದಲ್ಲಿ ಕೆಸಿಎ ಪದಾಧಿಕಾರಿಗಳ ವಿರುದ್ಧ ಶ್ರೀಶಾಂತ್ ವಿವಾದಾತ್ಮಕ ಮತ್ತು ಕಟು ಶಬ್ದಗಳ ಹೇಳಿಕೆಗಳನ್ನು ನೀಡಿದ್ದರು. ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಸ್ಥೆಯ ಹೆಸರಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಕಳೆದ ಕೇರಳ ಕ್ರಿಕೆಟ್ ಲೀಗ್ (ಕೆಸಿಎಲ್) ಸೀಸನ್‌ಗೂ ಮುನ್ನ ಅವರ ಮೇಲೆ ಈ ನಿಷೇಧ ಹೇರಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಅವರು ತಿರುವನಂತಪುರಂ ಮುನ್ಸಿಫ್ ನ್ಯಾಯಾಲಯದ ಮೆಟ್ಟಿಲೇರಿದ್ದರಾದರೂ, ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ನಂತರ ಶ್ರೀಶಾಂತ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಅಸೋಸಿಯೇಷನ್‌ಗೆ ಬೇಷರತ್ ಕ್ಷಮಾಪಣೆ ಪತ್ರ ಸಲ್ಲಿಸಿದ್ದರು. ಇಂದು ನಡೆದ ಕೆಸಿಎ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಪತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿ, ಸರ್ವಾನುಮತದಿಂದ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಯಿತು. ಆದರೆ, ಭವಿಷ್ಯದಲ್ಲಿ ಕ್ರಿಕೆಟ್‌ನ ಶಿಸ್ತಿಗೆ ಧಕ್ಕೆ ತರುವಂತಹ ಅಥವಾ ಸಂಸ್ಥೆಯ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿದರೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಸಿಎ ಶ್ರೀಶಾಂತ್‌ಗೆ ಎಚ್ಚರಿಕೆ ನೀಡಿದೆ.

ಮುಂಬರುವ ಕೇರಳ ಕ್ರಿಕೆಟ್ ಲೀಗ್ ಸೀಸನ್ 3 ಆರಂಭವಾಗಲಿರುವ ಈ ಸಂದರ್ಭದಲ್ಲಿ ಶ್ರೀಶಾಂತ್‌ಗೆ ಈ ನಿರ್ಧಾರದಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ನಿಷೇಧ ತೆರವಾಗಿರುವುದರಿಂದ ಅವರು ಲೀಗ್‌ನ ಪ್ರಮುಖ ತಂಡವಾದ 'ಏರೀಸ್ ಕೊಲ್ಲಂ ಸೇಲರ್ಸ್‌' ಫ್ರಾಂಚೈಸಿಯ ಸಹ-ಮಾಲೀಕರಾಗಿ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲು ದಾರಿ ಸುಗಮವಾಗಿದೆ. ಭಾರತ ಕ್ರಿಕೆಟ್‌ನ ಅತ್ಯಂತ ಆಕ್ರಮಣಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಶ್ರೀಶಾಂತ್, ಭಾರತದ ಪರ 27 ಟೆಸ್ಟ್ ಪಂದ್ಯಗಳಿಂದ 87 ವಿಕೆಟ್, 53 ಏಕದಿನ ಪಂದ್ಯಗಳಿಂದ 75 ವಿಕೆಟ್ ಹಾಗೂ 10 ಟಿ20 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದಾರೆ. ಇನ್ನು ದೇಶಿ ಕ್ರಿಕೆಟ್‌ನಲ್ಲಿ 74 ಪ್ರಥಮ ದರ್ಜೆ ಪಂದ್ಯಗಳಿಂದ 213 ವಿಕೆಟ್, 92 ಲಿಸ್ಟ್ 'ಎ' ಪಂದ್ಯಗಳಿಂದ 124 ವಿಕೆಟ್ ಹಾಗೂ 65 ಟಿ20 ಪಂದ್ಯಗಳಿಂದ 54 ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ.

Category
ಕರಾವಳಿ ತರಂಗಿಣಿ