image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ ವಿರುದ್ಧ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಐರ್ಲೆಂಡ್ ಕೋಚ್ ಹೆನ್ರಿಕ್ ಮಲನ್ ರಾಜೀನಾಮೆ!

ಭಾರತ ವಿರುದ್ಧ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಐರ್ಲೆಂಡ್ ಕೋಚ್ ಹೆನ್ರಿಕ್ ಮಲನ್ ರಾಜೀನಾಮೆ!

ಹೈದರಾಬಾದ್ : ಭಾರತ ತಂಡವನ್ನು ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದ ಬೆನ್ನಲ್ಲೇ ಐರ್ಲೆಂಡ್ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡವನ್ನು ಈ ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ಮುಖ್ಯ ಕೋಚ್ ಹೆನ್ರಿಕ್ ಮಲನ್ ಇದ್ದಕ್ಕಿದ್ದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕ್ರಿಕೆಟ್ ಐರ್ಲೆಂಡ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಅಚ್ಚರಿಯ ನಿರ್ಧಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ.

ಜೂನ್ 28 ರ ಭಾನುವಾರ ಬೆಲ್‌ಫಾಸ್ಟ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಬಲಿಷ್ಠ ಭಾರತವನ್ನು ಕೇವಲ 1 ರನ್‌ನಿಂದ ಸೋಲಿಸಿತ್ತು. ಇದರೊಂದಿಗೆ ಐರಿಶ್ ತಂಡವು ಎರಡು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾವನ್ನು 2-0 ಅಂತರದಿಂದ ವೈಟ್ ವಾಶ್ ಮಾಡಿತು. ಇದು ಐರಿಶ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸರಣಿ ಗೆಲುವಾಗಿದೆ. ಹೀಗಾಗಿ ಇಡೀ ತಂಡ, ಅಭಿಮಾನಿಗಳು ಮತ್ತು ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ಮಹಾನ್ ವಿಜಯದ ಸಂಭ್ರಮದಲ್ಲಿ ಮುಳುಗಿರುವಾಗಲೇ, ಜೂನ್ 29 ರ ಸೋಮವಾರದಂದು ಕೋಚ್ ಮಲನ್ ಅವರ ಈ ದಿಢೀರ್ ರಾಜೀನಾಮೆ ಸುದ್ದಿ ಹೊರಬಿದ್ದಿದೆ.

ಕ್ರಿಕೆಟ್ ಐರ್ಲೆಂಡ್ ನೀಡಿರುವ ಮಾಹಿತಿ ಪ್ರಕಾರ, ಮಲನ್ ಅವರ ಒಪ್ಪಂದವು 2027 ರವರೆಗೆ ಇತ್ತು. ಆದಾಗ್ಯೂ ಮುಂಬರುವ ವರ್ಷಗಳ ಸವಾಲುಗಳಿಗೆ ಹಾಗೂ ಮುಂದಿನ ದಿನಗಳ ತಯಾರಿಗಾಗಿ ಹೊಸ ತರಬೇತುದಾರರಿಗೆ ಈಗಿನಿಂದಲೇ ಸೂಕ್ತ ಸಮಯಾವಕಾಶ ನೀಡುವುದು ಮುಖ್ಯ ಎಂದು ಭಾವಿಸಿ ಅವರು ಅವಧಿಗೂ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದಾರೆ. ತಂಡದೊಂದಿಗೆ ತಾವು ಸಾಧಿಸಿದ ಯಶಸ್ಸಿನ ಬಗ್ಗೆ ಹೆಮ್ಮೆ ಮತ್ತು ಸಂತೋಷವಿದೆ ಎಂದು ಮಲನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2022 ರಲ್ಲಿ ಐರಿಶ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಹೆನ್ರಿಕ್ ಮಲನ್ ಅವರ ತರಬೇತಿ ಅವಧಿಯು ಅತ್ಯಂತ ಸ್ಮರಣೀಯವಾಗಿತ್ತು. ಅವರ ಮಾರ್ಗದರ್ಶನದಲ್ಲಿ ಐರ್ಲೆಂಡ್ ತಂಡವು ಸತತವಾಗಿ ಮೂರು ಟಿ20 ವಿಶ್ವಕಪ್‌ಗಳಿಗೆ ಅರ್ಹತೆ ಪಡೆದಿದ್ದಲ್ಲದೆ, ಮೂರು ಮಹತ್ವದ ಟೆಸ್ಟ್ ಪಂದ್ಯಗಳನ್ನೂ ಗೆದ್ದುಕೊಂಡಿತು. ಅಷ್ಟೇ ಅಲ್ಲದೆ, 2022 ರ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಐರ್ಲೆಂಡ್, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧವೂ ಜಯಭೇರಿ ಬಾರಿಸಿತ್ತು. ಇದೀಗ ವಿಶ್ವ ಚಾಂಪಿಯನ್ ಭಾರತದ ವಿರುದ್ಧದ ಐತಿಹಾಸಿಕ ಟಿ20 ಸರಣಿ ಗೆಲುವಿನ ಸವಿಯೊಂದಿಗೆ ಮಲನ್ ಅವರ ಈ ಯಶಸ್ವಿ ಪಯಣ ಕೊನೆಗೊಂಡಿದೆ.

Category
ಕರಾವಳಿ ತರಂಗಿಣಿ