image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುಎಸ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟ ಕಿದಂಬಿ ಶ್ರೀಕಾಂತ್

ಯುಎಸ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟ ಕಿದಂಬಿ ಶ್ರೀಕಾಂತ್

ಹೈದರಾಬಾದ್ : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಯುಎಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ತಡರಾತ್ರಿ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಜಪಾನ್‌ನ ನಾಲ್ಕನೇ ಶ್ರೇಯಾಂಕಿತ ಆಟಗಾರ ಯುಡೈ ಒಕಿಮೊಟೊ ಅವರನ್ನು ಮಣಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಆರಂಭದಿಂದಲೇ ಅತ್ಯುತ್ತಮ ಆಟ ಪ್ರದರ್ಶಿಸಿದ ಶ್ರೀಕಾಂತ್ ಮೊದಲ ಸೆಟ್ ಅನ್ನು 22-20 ಅಂತರದಿಂದ ಗೆದ್ದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಪುಟಿದೆದ್ದ ಜಪಾನ್ ಆಟಗಾರ 21-15 ರಿಂದ ಗೆಲುವು ಸಾಧಿಸಿ ಸಮಬಲ ತಂದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ತಮ್ಮ ಅನುಭವವನ್ನು ಧಾರೆ ಎರೆದ ಶ್ರೀಕಾಂತ್ 21-19 ರಿಂದ ಜಯಭೇರಿ ಬಾರಿಸಿದರು. ಆ ಮೂಲಕ 22-20, 15-21, 21-19 ಅಂತರದಲ್ಲಿ ಜಯ ಸಾಧಿಸಿ ಈ ವರ್ಷದ ತಮ್ಮ ಮೊದಲ ಅಂತರರಾಷ್ಟ್ರೀಯ ಟೂರ್ನಿಯ ಫೈನಲ್ ತಲುಪಿದ ಸಾಧನೆ ಮಾಡಿದರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅವರು ಚೈನೀಸ್ ತೈಪೆಯ ಸು ಲಿ ಯಾಂಗ್ ಅವರನ್ನು ಎದುರಿಸಲಿದ್ದಾರೆ.

ಇದೇ ವಿಭಾಗದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಭರವಸೆಯ ಯುವ ಆಟಗಾರ ರೋನಕ್ ಚೌಹಾಣ್ ಅವರ ಹೋರಾಟ ಕೊನೆಗೊಂಡಿದೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ರೋನಕ್, ಸೆಮಿಫೈನಲ್‌ನಲ್ಲಿ ಚೈನೀಸ್ ತೈಪೆಯ ಅಗ್ರ ಶ್ರೇಯಾಂಕಿತ ಆಟಗಾರ ಸು ಲಿ ಯಾಂಗ್ ವಿರುದ್ಧ 17-21, 19-21 ನೇರ ಸೆಟ್‌ಗಳಿಂದ ಸೋಲೊಪ್ಪಿಕೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಪದಕ ಗೆಲ್ಲುವ ಅವರ ಕನಸು ಭಗ್ನಗೊಂಡಿತು. ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಯುವ ಆಟಗಾರ್ತಿ ದೇವಿಕಾ ಸಿಹಕ್ ಅವರು ಡೆನ್ಮಾರ್ಕ್‌ನ ಎರಡನೇ ಶ್ರೇಯಾಂಕದ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ ಹೋರಾಡಿ ಪರಾಭವಗೊಂಡರು. ಮೊದಲ ಸೆಟ್ ಅನ್ನು 21-15 ರಿಂದ ಗೆದ್ದು ಶುಭಾರಂಭ ಮಾಡಿದ ದೇವಿಕಾಗೆ ನಂತರದ ಸೆಟ್‌ಗಳಲ್ಲಿ ಕ್ರಿಸ್ಟೋಫರ್ಸನ್ ಪ್ರಬಲ ಪೈಪೋಟಿ ನೀಡಿದರು. ದ್ವಿತೀಯ ಸೆಟ್ ಅನ್ನು 21-11 ರಿಂದ ಹಾಗೂ ನಿರ್ಣಾಯಕ ಮೂರನೇ ಸೆಟ್ ಅನ್ನು 21-15 ರಿಂದ ಗೆದ್ದುಕೊಂಡ ಡೆನ್ಮಾರ್ಕ್ ಆಟಗಾರ್ತಿ ಫೈನಲ್ ಪ್ರವೇಶಿಸಿದರು. ಅಂತಿಮವಾಗಿ ದೇವಿಕಾ ಸಿಹಕ್ 21-15, 11-21, 15-21 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದರು.

Category
ಕರಾವಳಿ ತರಂಗಿಣಿ