image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐರ್ಲೆಂಡ್ ವಿರುದ್ಧ ಭಾರತಕ್ಕೆ ಶಾಕಿಂಗ್ ಸೋಲು: ಎರಡನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಾಧ್ಯತೆ?

ಐರ್ಲೆಂಡ್ ವಿರುದ್ಧ ಭಾರತಕ್ಕೆ ಶಾಕಿಂಗ್ ಸೋಲು: ಎರಡನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಾಧ್ಯತೆ?

ಬೆಲ್‌ಫಾಸ್ಟ್‌ : ಬೆಲ್‌ಫಾಸ್ಟ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 34 ರನ್‌ಗಳ ಆಘಾತಕಾರಿ ಸೋಲನ್ನು ಅನುಭವಿಸಿದೆ. ಸೂರ್ಯಕುಮಾರ್ ಯಾದವ್ ಬದಲಿಗೆ ನಾಯಕತ್ವ ವಹಿಸಿಕೊಂಡ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಜೋಡಿಯ ಮೊದಲ ಪಂದ್ಯದ ಪ್ರಯೋಗ ಯಶಸ್ವಿಯಾಗಲಿಲ್ಲ. ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಐರ್ಲೆಂಡ್ ತಂಡವು ಭಾರತವನ್ನು ಟಿ20 ಮಾದರಿಯಲ್ಲಿ ಸೋಲಿಸಿ ಇತಿಹಾಸ ಸೃಷ್ಟಿಸಿದೆ. ಈ ಅವಮಾನಕರ ಸೋಲಿನ ಬೆನ್ನಲ್ಲೇ, ಜೂನ್ 28 ರಂದು ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂರು ಪ್ರಮುಖ ಬದಲಾವಣೆಗಳಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಮೊದಲ ಪಂದ್ಯದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಮ್ಯಾನೇಜ್ಮೆಂಟ್ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಜೋಡಿಗೆ ಆರಂಭಿಕ ಅವಕಾಶ ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಹಿನ್ನೆಲೆಯಲ್ಲಿ ಎರಡನೇ ಪಂದ್ಯಕ್ಕೆ ಸಂಜು ಜಾಗದಲ್ಲಿ 15 ವರ್ಷದ ಆಕ್ರಮಣಕಾರಿ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ನೀಡಲು ಗಂಭೀರ್ ಚಿಂತನೆ ನಡೆಸಿದ್ದಾರೆ.

ಇನ್ನು ಮೊದಲ ಪಂದ್ಯದಲ್ಲಿ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಂಪೂರ್ಣ ವೈಫಲ್ಯ ಕಂಡರು. ಕೇವಲ ಒಂದು ಓವರ್ ಬೌಲಿಂಗ್ ಮಾಡಿ 19 ರನ್ ಬಿಟ್ಟುಕೊಟ್ಟ ಅವರು ಬ್ಯಾಟಿಂಗ್‌ನಲ್ಲೂ ಪ್ರಭಾವ ಬೀರಲಿಲ್ಲ. ಹೀಗಾಗಿ ಅವರ ಬದಲಿಗೆ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿರುವ ಮತ್ತು ಭಾರತ 'ಎ' ಪರ ಅದ್ಭುತ ಪ್ರದರ್ಶನ ನೀಡಿರುವ ವೇಗದ ಬೌಲಿಂಗ್ ಆಲ್ ರೌಂಡರ್ ಸೂರ್ಯಾಂಶ್ ಶೆಡ್ಜ್ ಅವರಿಗೆ ಚೊಚ್ಚಲ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ಬೌಲಿಂಗ್ ವಿಭಾಗದಲ್ಲಿ ಅತ್ಯಂತ ದುಬಾರಿಯಾದ ಪ್ರಸಿದ್ಧ್ ಕೃಷ್ಣ ತಮ್ಮ 4 ಓವರ್‌ಗಳ ಕೋಟಾದಲ್ಲಿ ಬರೋಬ್ಬರಿ 57 ರನ್ ನೀಡಿ ಕಳಪೆ ಪ್ರದರ್ಶನ ನೀಡಿದರು. ಇವರ ಜಾಗದಲ್ಲಿ ಐಪಿಎಲ್ 2026 ರಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದಿದ್ದ ಯುವ ತಾರೆ ಪ್ರಿನ್ಸ್ ಯಾದವ್ ತಂಡಕ್ಕೆ ಸೇರ್ಪಡೆಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕ ಎರಡನೇ ಪಂದ್ಯದಲ್ಲಿ ಭಾರತ ತಂಡ ಒಟ್ಟಿಗೆ ಮೂವರು ಹೊಸ ಆಟಗಾರರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ವೇದಿಕೆ ಸಿದ್ಧಪಡಿಸುತ್ತಿದೆ.

Category
ಕರಾವಳಿ ತರಂಗಿಣಿ