image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಗ್ಲಾ ಎದುರು ಗೆದ್ದು ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡ ಭಾರತದ ವನಿತೆಯರಿಗೆ ಆಸೀಸ್ ಎದುರು 'ಮಾಡೂ ಇಲ್ಲವೇ ಮಡಿ' ಹೋರಾಟ!

ಬಾಂಗ್ಲಾ ಎದುರು ಗೆದ್ದು ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡ ಭಾರತದ ವನಿತೆಯರಿಗೆ ಆಸೀಸ್ ಎದುರು 'ಮಾಡೂ ಇಲ್ಲವೇ ಮಡಿ' ಹೋರಾಟ!

ಹೈದರಾಬಾದ್ : ​ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಮತ್ತೆ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾ ಎದುರು ರೋಚಕ ಸೋಲು ಅನುಭವಿಸಿದ್ದ ಭಾರತ ಮಹಿಳಾ ತಂಡವು, ಇದೀಗ ಬಾಂಗ್ಲಾದೇಶ ಎದುರು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕಳಪೆ ಕ್ಷೇತ್ರರಕ್ಷಣೆ ಹಾಗೂ ಕೆಲವು ನೀರಸ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಭಾರತ ಮಹಿಳಾ ತಂಡವು ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿದೆ ಭಾರತ ಮಹಿಳಾ ತಂಡದ ಟಿ20 ವಿಶ್ವಕಪ್ ಹಾದಿ ಇನ್ನಷ್ಟು ಸುಗಮವಾಗಿದೆ.

​ಭಾರತ ತಂಡವು ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ಎದುರು ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸುವ ಮೂಲಕ ಸೆಮೀಸ್ ಹಾದಿಯನ್ನು ಕಠಿಣ ಮಾಡಿಕೊಂಡಿತ್ತು. ಆದರೆ ಇದೀಗ ಬಾಂಗ್ಲಾದೇಶ ಎದುರು ಗೆಲುವು ಸಾಧಿಸುತ್ತಿದ್ದಂತೆಯೇ ಹರ್ಮನ್‌ಪ್ರೀತ್ ಕೌರ್ ಪಡೆಯ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮವಾಗಿದೆ. ಇದೀಗ ಭಾರತ ಮಹಿಳಾ ತಂಡವು ಜೂನ್ 28ರಂದು ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಲಾರ್ಡ್ಸ್‌ ಮೈದಾನದಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸಿದರೆ, ಸೆಮೀಸ್‌ಗೇರುವುದು ಬಹುತೇಕ ಖಚಿತ. ಸೋತರೇ ಭಾರತದ ಸೆಮೀಸ್ ಕನಸು ಬಹುತೇಕ ನುಚ್ಚುನೂರಾಗಲಿದೆ.

​ಸದ್ಯ 'ಎ' ಗುಂಪಿನಲ್ಲಿ ಆಸ್ಟ್ರೇಲಿಯಾ ತಂಡವು ಆಡಿದ 4 ಪಂದ್ಯಗಳಲ್ಲಿ ಗೆದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೊಂದೆಡೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಹಂಚಿಕೊಂಡಿವೆ. ಬಾಂಗ್ಲಾದೇಶ ಆಡಿದ 4 ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಎರಡು ಸೋಲು ಸಹಿತ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

​ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಎಂಟ್ರಿ ಕೊಡಲಿವೆ. ಆಸ್ಟ್ರೇಲಿಯಾ 8 ಅಂಕಗಳ ಜತೆಗೆ +4.724 ನೆಟ್‌ ರನ್‌ರೇಟ್ ಹೊಂದಿದೆ. ಇನ್ನು ಭಾರತ +2.268 ಹಾಗೂ ದಕ್ಷಿಣ ಆಫ್ರಿಕಾ +0.734 ನೆಟ್‌ ರನ್‌ರೇಟ್ ಹೊಂದಿದೆ. ಭಾರತ ತಂಡ ಒಂದು ವೇಳೆ ಆಸ್ಟ್ರೇಲಿಯಾ ಎದುರು ಗೆದ್ದರೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮೀಸ್‌ಗೇರಲಿವೆ. ಒಂದು ವೇಳೆ ಭಾರತ ಸೋತು, ದಕ್ಷಿಣ ಆಫ್ರಿಕಾ ತಂಡವು ಜೂನ್ 28ರಂದು ನಡೆಯಲಿರುವ ಬಾಂಗ್ಲಾದೇಶ ಎದುರು ಗೆದ್ದರೇ ಹರಿಣಗಳ ಪಡೆ ಸೆಮಿಫೈನಲ್‌ಗೇರಲಿದೆ. ಒಂದು ವೇಳೆ ಭಾರತ ಆಸ್ಟ್ರೇಲಿಯಾ ಎದುರು ಸಣ್ಣ ಅಂತರದಲ್ಲಿ ಸೋತು, ಬಾಂಗ್ಲಾದೇಶ ಎದುರು ದಕ್ಷಿಣ ಆಫ್ರಿಕಾ ತಂಡವು ಸೋತರೇ, ಭಾರತಕ್ಕೆ ಸೆಮೀಸ್‌ಗೇರುವ ಅವಕಾಶ ಮತ್ತಷ್ಟು ಹೆಚ್ಚಾಗಲಿದೆ.

Category
ಕರಾವಳಿ ತರಂಗಿಣಿ