image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೇರಿಕಾ ಓಪನ್ ಬ್ಯಾಡ್ಮಿಂಟನ್: ಭಾರತದ ಸವಾಲು

ಅಮೇರಿಕಾ ಓಪನ್ ಬ್ಯಾಡ್ಮಿಂಟನ್: ಭಾರತದ ಸವಾಲು

ಫುಲ್ಲರ್ರ್ಟನ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿರುವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಾಗೂ ಯುವ ಆಟಗಾರ್ತಿ ತನ್ವಿ ಶರ್ಮಾ ಅವರು ಅಮೇರಿಕಾ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಹಾಗೂ ವಿಶ್ವದ 14ನೇ ಶ್ರೇಯಾಂಕದ ಆಟಗಾರರಾಗಿರುವ ಲಕ್ಷ್ಯ ಸೇನ್ ಅವರು ಬೆಲ್ಜಿಯಂನ ಜೂಲಿಯನ್ ಕರ್ಗಗಿ ವಿರುದ್ಧ ಪುರುಷರ ಸಿಂಗಲ್ಸ್ ಅಭಿಯಾನವನ್ನು ಆರಂಭಿಸಲಿದ್ದಾರೆ. ಇದೇ ವೇಳೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಕಿಡಂಬಿ ಶ್ರೀಕಾಂತ್ ಅವರು ತಮ್ಮ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಲಿಯಾವ್ಹೊ-ಫು ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ ಸನೀತ್ ದಯಾನಂದ್ ಅವರು ಜಪಾನಿನ ನಾಲ್ಕನೇ ಶ್ರೇಯಾಂಕದ ಆಟಗಾರ ಯುಡೈ ಒಕಿಮೊಟೊ ವಿರುದ್ಧ ಸೆಣಸಾಡಲಿದ್ದು, ಎಸ್. ಶಂಕರ್ ಮುತ್ತುಸ್ವಾಮಿ ಅವರು ಕ್ವಾಲಿಫೈಯರ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

​ಮಹಿಳೆಯರ ಸಿಂಗಲ್ಸ್ ವಿಭಾಗದ ಡ್ರಾದಲ್ಲಿ ಭಾರತವು ಒಟ್ಟು ಏಳು ಆಟಗಾರ್ತಿಯರನ್ನು ಹೊಂದಿದ್ದು, ಐದನೇ ಶ್ರೇಯಾಂಕದ ತನ್ವಿ ಶರ್ಮಾ ಹಾಗೂ ಆರನೇ ಶ್ರೇಯಾಂಕದ ದೇವಿಕಾ ಸಿಹಾಗ್ ತಂಡದ ನೇತೃತ್ವ ವಹಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ 17 ವರ್ಷದ ಯುವ ಪ್ರತಿಭೆ ತನ್ವಿ ಅವರು ಜರ್ಮನಿಯ ವೋನ್ ವಿರುದ್ಧ ಮತ್ತು ಥಾಯ್ಲೆಂಡ್ ಮಾಸ್ಟರ್ಸ್ ವಿಜೇತೆ ದೇವಿಕಾ ಅವರು ಪೆರುವಿನ ಇನೆಸ್ ಲುಸಿಯಾ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತೀಸಾ ಜೊಲಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿಯು ಭಾರತ ತಂಡವನ್ನು ಪ್ರತಿನಿಧಿಸಲಿದ್ದು, ಸ್ಪೇನ್‌ನ ಪೌಲಾ ಲೊಪೆಝ್ ಹಾಗೂ ಲುಸಿಯಾ ರೊಡ್ರಿಗಸ್ ಜೋಡಿಯನ್ನು ಎದುರಿಸಲಿದೆ.

Category
ಕರಾವಳಿ ತರಂಗಿಣಿ