ಬೆಂಗಳೂರು : ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಆಲದಕಟ್ಟಿ ಕೆ.ಎಂ. ಗ್ರಾಮದ ಲಕ್ಷ್ಮೀ ರಾಯಪ್ಪ ರಾಯಣ್ಣವರ, ಮುಂಬರುವ ಪ್ಯಾರಾ ಕಾಮನ್ ವೆಲ್ತ್ ಗೇಮ್ಸ್ 2026 ಕ್ಕೆ ಭಾರತೀಯ ಮಹಿಳಾ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹುಟ್ಟಿನಿಂದಲೇ ಪೋಲಿಯೊ ಸಮಸ್ಯೆಯಿಂದಾಗಿ ಅಂಗವೈಕಲ್ಯ ಎದುರಿಸುತ್ತಿದ್ದರೂ ಧೃತಿಗೆಡದ ಇವರು, ಕಠಿಣ ಪರಿಶ್ರಮದಿಂದ ವ್ಹೀಲ್ ಚೇರ್ ಮೇಲೆಯೇ ಸಾಧನೆಯ ಶಿಖರ ಏರಲು ಸಜ್ಜಾಗಿದ್ದಾರೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆಯಲಿರುವ ಈ ಕ್ರೀಡಾಕೂಟದ ಭಾರತೀಯ ತಂಡಕ್ಕೆ ಆಯ್ಕೆಯಾಗಿರುವ ನಾಲ್ಕು ಆಟಗಾರ್ತಿಯರಲ್ಲಿ ಕರ್ನಾಟಕದ ಏಕೈಕ ಪ್ರತಿನಿಧಿ ಲಕ್ಷ್ಮೀ ಅವರಾಗಿದ್ದಾರೆ. ಬಡ ರೈತಾಪಿ ಕುಟುಂಬದಲ್ಲಿ ಜನಿಸಿದ ಲಕ್ಷ್ಮೀ ಅವರು ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಪದವಿ ಪಡೆದಿದ್ದು, ಕ್ರೀಡೆಗಾಗಿ ತಮ್ಮ ಅತಿಥಿ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಜ್ಜಾಗುತ್ತಿದ್ದಾರೆ. 2019 ರಿಂದ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡೆ ಆರಂಭಿಸಿದ ಇವರು ಕೇವಲ ಮೂರೇ ವರ್ಷಗಳಲ್ಲಿ ನುರಿತ ಆಟಗಾರ್ತಿಯಾಗಿ ಬೆಳೆದಿದ್ದು, ಈಗಾಗಲೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ 25 ಕ್ಕೂ ಹೆಚ್ಚು ಪದಕಗಳನ್ನು ಹಾಗೂ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಮೈದಾನದ ಸೌಲಭ್ಯವಿಲ್ಲದಿದ್ದರೂ ಕಚ್ಛಾ ರಸ್ತೆಯಲ್ಲೇ ಅಭ್ಯಾಸ ನಡೆಸಿ, ಬೆಳಗಾವಿಯ ಮೈದಾನದಲ್ಲಿ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಶ್ರಮಿಸುತ್ತಿರುವ ಇವರು ಭಾರತವನ್ನು ಚಾಂಪಿಯನ್ ಮಾಡುವ ಕನಸು ಹೊಂದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಲಕ್ಷ್ಮೀ ಅವರು, ಕ್ರೀಡಾ ಮೀಸಲಾತಿಯಡಿ ಸರ್ಕಾರಿ ನೌಕರಿ ನೀಡಿ ಆಸರೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.