ಹೈದರಾಬಾದ್ : ಮೊಹಮ್ಮದ್ ಸಲಾಹ್ ನೇತೃತ್ವದ ಈಜಿಪ್ಟ್ ತಂಡವು 2026ರ ಫಿಫಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 1934ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದ್ದ ಈಜಿಪ್ಟ್, ಬರೋಬ್ಬರಿ 92 ವರ್ಷಗಳ (33,628 ದಿನಗಳು) ದೀರ್ಘ ಕಾಯುವಿಕೆಯ ನಂತರ ಪಂದ್ಯಾವಳಿಯಲ್ಲಿ ತನ್ನ ಚೊಚ್ಚಲ ಗೆಲುವನ್ನು ದಾಖಲಿಸಿದೆ. ಈ ಅದ್ಭುತ ಗೆಲುವಿನೊಂದಿಗೆ ಈಜಿಪ್ಟ್ ಗ್ರೂಪ್ ಜಿ ನಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್ ಹಂತ ತಲುಪುವ ತನ್ನ ಭರವಸೆಯನ್ನು ಬಲಪಡಿಸಿಕೊಂಡಿದೆ.
ವ್ಯಾಂಕೋವರ್‌ನ ಬಿಸಿ ಪ್ಲೇಸ್ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ, ಆರಂಭದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿತ್ತು. ಪಂದ್ಯದ 15ನೇ ನಿಮಿಷದಲ್ಲಿ ಫಿನ್ ಸೆರ್ಮನ್ ಗಳಿಸಿದ ಆಕರ್ಷಕ ಗೋಲಿನ ನೆರವಿನಿಂದ ನ್ಯೂಜಿಲೆಂಡ್ 1-0 ಮುನ್ನಡೆ ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ಈಜಿಪ್ಟ್ ಭರ್ಜರಿ ಪುನರಾಗಮನ ಮಾಡಿತು. 58ನೇ ನಿಮಿಷದಲ್ಲಿ ಮುಸ್ತಫಾ ಜಿಕೊ ಹೆಡರ್ ಮೂಲಕ ಗೋಲು ಬಾರಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ಇದರ ಬೆನ್ನಲ್ಲೇ 67ನೇ ನಿಮಿಷದಲ್ಲಿ ಜಿಕೊ ನೀಡಿದ ಬ್ಯಾಕ್-ಹೀಲ್ ಪಾಸ್ ಅನ್ನು ಬಳಸಿಕೊಂಡ ನಾಯಕ ಮೊಹಮ್ಮದ್ ಸಲಾಹ್, ಅತ್ಯಾಕರ್ಷಕ ಗೋಲು ಗಳಿಸಿ ತಂಡಕ್ಕೆ 2-1 ರ ಮುನ್ನಡೆ ತಂದುಕೊಟ್ಟರು. ಪಂದ್ಯದ 82ನೇ ನಿಮಿಷದಲ್ಲಿ ಸಲಾಹ್ ನೀಡಿದ ಕಾರ್ನರ್ ಕಿಕ್ ನೆರನಿಂದ ಬದಲಿ ಆಟಗಾರ ಟ್ರೆಜೆಗುಟ್ ಕರಾರುವಕ್ಕಾದ ಡೈವಿಂಗ್ ಹೆಡರ್ ಮೂಲಕ ಮೂರನೇ ಗೋಲು ಬಾರಿಸಿ ಈಜಿಪ್ಟ್ ಗೆಲುವನ್ನು ಖಚಿತಪಡಿಸಿದರು.
ಈಜಿಪ್ಟ್‌ನ ಈ ಐತಿಹಾಸಿಕ ಜಯದಲ್ಲಿ ನಾಯಕ ಮೊಹಮ್ಮದ್ ಸಲಾಹ್ ಹಾಗೂ ಮುಸ್ತಫಾ ಜಿಕೊ ತಲಾ ಒಂದು ಗೋಲು ಮತ್ತು ಒಂದು ಅಸಿಸ್ಟ್ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ 85ನೇ ನಿಮಿಷದಲ್ಲಿ ಸಲಾಹ್ ಮೈದಾನದಿಂದ ಹೊರನಡೆದಾಗ, ಕ್ರೀಡಾಂಗಣದಲ್ಲಿದ್ದ ಇಡೀ ಅಭಿಮಾನಿ ಸಾಗರವು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿತು. ಈ ಐತಿಹಾಸಿಕ ಗೆಲುವು ವರ್ಷಗಳಿಂದ ಕಾಯುತ್ತಿದ್ದ ಈಜಿಪ್ಟ್ ಫುಟ್‌ಬಾಲ್ ಅಭಿಮಾನಿಗಳಲ್ಲಿ ಹೊಸ ಸಂಭ್ರಮವನ್ನು ತಂದಿದೆ.