ಚೆನ್ನೈ : ಆಫ್ಘಾನಿಸ್ತಾನ ತಂಡದ ವಿರುದ್ಧ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 79 ರನ್ ಸಿಡಿಸಿದ ಶರ್ಮಾ, ಭಾರತ ತಂಡದ ಸುಲಭ ಗೆಲುವಿಗೆ ಮತ್ತು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಇದೇ ಪಂದ್ಯದಲ್ಲಿ ಅದ್ಭುತವಾಗಿ ಆಡಿದ ಯಶಸ್ವಿ ಜೈಸ್ವಾಲ್ ಕೂಡ 86 ಎಸೆತಗಳಲ್ಲಿ 110 ರನ್ ಗಳಿಸಿ ಗಮನ ಸೆಳೆದರು.
ಈ ಅರ್ಧಶತಕದೊಂದಿಗೆ 39 ವರ್ಷ 51 ದಿನದ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅರ್ಧಶತಕ ಗಳಿಸಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ 1989ರ ಅಕ್ಟೋಬರ್ 15ರಂದು ಪಾಕಿಸ್ತಾನದ ವಿರುದ್ಧ ಶಾರ್ಜಾದಲ್ಲಿ 88 ರನ್ ಗಳಿಸಿದ್ದ ಮೊಹಿಂದರ್ ಅಮರನಾಥ್ (39 ವರ್ಷ 21 ದಿನ) ಅವರ ಸುದೀರ್ಘ ಕಾಲದ ದಾಖಲೆಯನ್ನು ಶರ್ಮಾ ಮುರಿದರು.
ಇಷ್ಟೇ ಅಲ್ಲದೆ, ರೋಹಿತ್ ಶರ್ಮಾ ಅವರು ಭಾರತದ ಮಾಜಿ ದಿಗಿಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರ ದಾಖಲೆಗಳನ್ನೂ ಹಿಂದಿಕ್ಕಿದ್ದಾರೆ. ಸದ್ಯ ಒಟ್ಟು 16,137 ಅಂತಾರಾಷ್ಟ್ರೀಯ ರನ್ ಕಲೆಹಾಕಿರುವ ರೋಹಿತ್, ಅತಿಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ (16119 ರನ್), ಸಚಿನ್ ತೆಂಡೂಲ್ಕರ್ (15335 ರನ್), ಸುನಿಲ್ ಗಾವಸ್ಕರ್ (12258 ರನ್) ಮತ್ತು ಶಿಖರ್ ಧವನ್ (10867 ರನ್) ಅವರ ನಂತರದ ಸ್ಥಾನಗಳಲ್ಲಿದ್ದಾರೆ.