image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂತರರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಭಾರತೀಯರ ಪದಕಗಳ ಮಹಾ ಬೇಟೆ: ಮಹಿಳಾ ಮತ್ತು ಪುರುಷರ ತಂಡದಿಂದ ತಲಾ 4 ಚಿನ್ನದ ಪದಕ

ಅಂತರರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಭಾರತೀಯರ ಪದಕಗಳ ಮಹಾ ಬೇಟೆ: ಮಹಿಳಾ ಮತ್ತು ಪುರುಷರ ತಂಡದಿಂದ ತಲಾ 4 ಚಿನ್ನದ ಪದಕ

ಹೊಸದಿಲ್ಲಿ : ರುಕಿಯಾದಲ್ಲಿ ನಡೆದ ಆಹ್ವಾನಿತ 56ನೇ ಆವೃತ್ತಿಯ ಗ್ರಾಂಡ್ ಬಾಕ್ಸಿಂಗ್ ಟೂರ್ನಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಬಾಕ್ಸರ್‌ಗಳು ಒಟ್ಟು 12 ಪದಕಗಳನ್ನು ಜಯಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮುಂಬರುವ ಪ್ರಮುಖ ಕ್ರೀಡಾಕೂಟಗಳಿಗೆ ಭಾರತೀಯ ಬಾಕ್ಸಿಂಗ್ ಪಡೆ ಸಂಪೂರ್ಣ ಸಜ್ಜಾಗಿದೆ ಎಂಬುದನ್ನು ಈ ಭರ್ಜರಿ ಪ್ರದರ್ಶನವು ಸಾಬೀತುಪಡಿಸಿದೆ. ಟೂರ್ನಿಯಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ (75 ಕೆಜಿ), ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಪ್ರೀತಿ ಪವಾರ್ (54 ಕೆಜಿ), ಸಾಕ್ಷಿ ಚೌಧರಿ (51 ಕೆಜಿ) ಹಾಗೂ ಪ್ರಿಯಾ ಫಂಫಾಸ್ (60 ಕೆಜಿ) ತಮ್ಮ ಎದುರಾಳಿಗಳ ವಿರುದ್ಧ ಸುಲಭ ಗೆಲುವು ದಾಖಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದೇ ವಿಭಾಗದ ಮತ್ತೊಬ್ಬ ಪ್ರತಿಭಾವಂತ ಬಾಕ್ಸರ್ ಪ್ರವೀಣ್ ಹೂಡಾ (65 ಕೆಜಿ) ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಪದಕಗಳ ಪಟ್ಟಿಯನ್ನು ಹೆಚ್ಚಿಸಿದ್ದಾರೆ.

ಮಹಿಳಾ ತಂಡದ ಅದ್ಭುತ ಸಾಧನೆಗೆ ಸರಿಸಾಟಿಯಾಗಿ ನಿಂತ ಪುರುಷರ ತಂಡ ಕೂಡ ನಾಲ್ಕು ಚಿನ್ನದ ಪದಕಗಳನ್ನು ಜಯಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಿದೆ. ಭಾರತದ ಹೆಮ್ಮೆಯ ಬಾಕ್ಸರ್‌ಗಳಾದ ಜಾದುಮಣಿ ಸಿಂಗ್ (55 ಕೆಜಿ), ಸಚಿನ್ (60 ಕೆಜಿ), ಅಂಕುಶ್ (80 ಕೆಜಿ) ಹಾಗೂ ನರೇಂದರ್ (+90 ಕೆಜಿ) ತಮ್ಮ ತಮ್ಮ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸುವರ್ಣ ಸಾಧನೆ ಮಾಡಿದ್ದಾರೆ.

ಇನ್ನುಳಿದಂತೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿ ಎಡವಿದ ಆದಿತ್ಯ ಪ್ರತಾಪ್ ಯಾದವ್ (65 ಕೆಜಿ) ಹಾಗೂ ಕಪಿಲ್ ಪೋಖಾರಿಯಾ (90 ಕೆಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಸುಮಿತ್ ಕುಂದು (70 ಕೆಜಿ) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಒಟ್ಟಾರೆಯಾಗಿ ಭಾರತದ ಬಾಕ್ಸಿಂಗ್ ತಂಡವು ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ 8 ಚಿನ್ನ, 3 ಬೆಳ್ಳಿ ಮತ್ತು 1 ಕಂಚು ಸೇರಿದಂತೆ ಒಟ್ಟು 12 ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಪ್ರತಿಮ ಯಶೋಗಾಥೆ ಬರೆದಿದೆ.

Category
ಕರಾವಳಿ ತರಂಗಿಣಿ