image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಚಿನ್ ದಾಖಲೆ ಸನಿಹಕ್ಕೆ ಜೋ ರೂಟ್: 14 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಬ್ಯಾಟರ್

ಸಚಿನ್ ದಾಖಲೆ ಸನಿಹಕ್ಕೆ ಜೋ ರೂಟ್: 14 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಬ್ಯಾಟರ್

ಲಂಡನ್ : ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 24 ರನ್ ಗಳಿಸುತ್ತಿದ್ದಂತೆ ಅವರು ಟೆಸ್ಟ್ ಮಾದರಿಯಲ್ಲಿ 14,000 ರನ್ ಪೂರೈಸಿದ ಜಗತ್ತಿನ ಎರಡನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ನಂತರ ಈ ಮಹತ್ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ರೂಟ್ ಆಗಿದ್ದಾರೆ.

ಸದ್ಯ 165 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ ಈ ಮೈಲಿಗಲ್ಲು ತಲುಪಿದ್ದಾರೆ. ಈ ಪಟ್ಟಿಯಲ್ಲಿ 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸದ್ಯ ರೂಟ್ ಇರುವ ಭರ್ಜರಿ ಫಾರ್ಮ್ ನೋಡಿದರೆ ಮುಂದಿನ ಎರಡು ವರ್ಷಗಳಲ್ಲಿ ಅವರು ಸಚಿನ್ ಅವರ ಸಾರ್ವಕಾಲಿಕ ಗರಿಷ್ಠ ರನ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಜೋ ರೂಟ್ ಅವರ ಈ ಐತಿಹಾಸಿಕ ಸಾಧನೆಯ ನಡುವೆಯೂ ಇಂಗ್ಲೆಂಡ್ ತಂಡಕ್ಕೆ ಪಂದ್ಯದಲ್ಲಿ ತೀವ್ರ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ತಂಡ ನೀಡಿದ್ದ 462 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, ಕೇವಲ 209 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ 253 ರನ್‌ಗಳ ಭಾರಿ ಸೋಲು ಅನುಭವಿಸಿತು. 13 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ರೂಟ್, ಏಕಾಂಗಿ ಹೋರಾಟ ನಡೆಸಿ 77 ರನ್ ಗಳಿಸಿ ಔಟಾದರು. ಈ ಸೋಲಿನೊಂದಿಗೆ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಇಂಗ್ಲೆಂಡ್ ಆಸೆ ಕೈಗೂಡಲಿಲ್ಲ.

Category
ಕರಾವಳಿ ತರಂಗಿಣಿ