image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಮುಡಿಗೇರಿಸಿಕೊಂಡ ಭಾರತ ‘ಎ’ ತಂಡ; ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ದಾಖಲೆ

ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಮುಡಿಗೇರಿಸಿಕೊಂಡ ಭಾರತ ‘ಎ’ ತಂಡ; ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ದಾಖಲೆ

ದಂಬುಲ್ಲಾ : ಶ್ರೀಲಂಕಾದ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಏಕದಿನ ಸರಣಿಯ ರೋಮಾಂಚಕ ಫೈನಲ್ ಪಂದ್ಯದಲ್ಲಿ ಆತಿಥೇಯರನ್ನು 66 ರನ್‌ಗಳಿಂದ ಸೋಲಿಸಿದ ಭಾರತ ಎ ತಂಡ ತ್ರಿಕೋನ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಅದ್ಭುತ ಗೆಲುವಿನೊಂದಿಗೆ ಭಾರತ ತಂಡ ಸತತ 7ನೇ ಬಾರಿಗೆ ತ್ರಿಕೋನ ಸರಣಿಯನ್ನು ಗೆದ್ದ ಐತಿಹಾಸಿಕ ದಾಖಲೆಯೊಂದಿಗೆ ಪ್ರವಾಸವನ್ನು ಯಶಸ್ವಿಯಾಗಿ ಅಂತ್ಯಗೊಳಿಸಿದೆ.

ಫೈನಲ್‌ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಭಾರತದ ಪರ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಕೇವಲ 29 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 94 ರನ್ ಚಚ್ಚಿದರು. ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಅವರು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ಹೊಸ ವಿಶ್ವ ದಾಖಲೆಯನ್ನು ಬರೆದರು. ಅವರ ಸ್ಟ್ರೈಕ್ ರೇಟ್ 324ಕ್ಕೂ ಹೆಚ್ಚಿತ್ತು. ಮತ್ತೊಬ್ಬ ಆರಂಭಿಕ ಪ್ರಿಯಾಂಶ್ ಆರ್ಯ 39 ರನ್ ಗಳಿಸಿದರೆ, ನಾಯಕ ತಿಲಕ್ ವರ್ಮಾ 67 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಅನುಕುಲ್ ರಾಯ್ ಕೇವಲ 15 ಎಸೆತಗಳಲ್ಲಿ 39 ರನ್ ಬಾರಿಸಿ ತಂಡದ ಸ್ಕೋರ್ ಅನ್ನು 377ಕ್ಕೆ ತಲುಪಿಸಿದರು. ಶ್ರೀಲಂಕಾ ಎ ತಂಡದ ಪರ ವನುಜಾ ಸಹನ್, ಕುಗಥಾಸ್ ಮಥುಲನ್ ಮತ್ತು ರವಿಂಡು ಫರ್ನಾಂಡೊ ತಲಾ ಎರಡು ವಿಕೆಟ್ ಪಡೆದರಾದರೂ ಸಾಕಷ್ಟು ದುಬಾರಿಯಾದರು.

ಭಾರತ ನೀಡಿದ 378 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಕಳಪೆ ಆರಂಭ ಪಡೆಯಿತು. ಮಧ್ಯಮ ಓವರ್‌ಗಳಲ್ಲಿ ಚೇತರಿಕೆ ಕಂಡು ಪ್ರತಿರೋಧ ತೋರಿದರೂ ಭಾರತೀಯ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿ 47.1 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲ್ ಔಟ್ ಆಯಿತು. ಶ್ರೀಲಂಕಾ ಪರ ವನುಜಾ ಸಹನ್ 62 ರನ್‌ ಹಾಗೂ ಸದೇರಾ ಸಮರವಿಕ್ರಮ 52 ರನ್ ಗಳಿಸಿ ಹೋರಾಟ ಪ್ರದರ್ಶಿಸಿದರು. ವಿಜಯಕಾಂತ್ ವ್ಯಾಸಕಾಂತ್ 39 ಮತ್ತು ನಾಯಕ ಸಹನ್ ಅರಚ್ಚಿಗೆ 38 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಯಶ್ ಠಾಕೂರ್ ಮತ್ತು ವಿಪ್ರಜ್ ನಿಗಮ್ ತಲಾ ಮೂರು ವಿಕೆಟ್ ಪಡೆದು ಯಶಸ್ವಿ ಎನಿಸಿಕೊಂಡರು. ಅನುಕುಲ್ ರಾಯ್ ಎರಡು ವಿಕೆಟ್ ಪಡೆದರೆ, ಅಶೋಕ್ ಶರ್ಮಾ ಮತ್ತು ತಿಲಕ್ ವರ್ಮಾ ತಲಾ ಒಂದು ವಿಕೆಟ್ ಹಂಚಿಕೊಂಡರು.

Category
ಕರಾವಳಿ ತರಂಗಿಣಿ