image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್: ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ

ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್: ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ

ಹೈದರಾಬಾದ್ : ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ. ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅವರು, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಲಿಸ್ಟ್ ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಎ ತಂಡದ ನಾಯಕ ಸಹನ್ ಅರಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಆರಂಭ ಒದಗಿಸಿದರು. ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್, ಎದುರಿಸಿದ ಮೊದಲ 11 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಒಳಗೊಂಡಂತೆ ಹಾಫ್ ಸೆಂಚುರಿ ಪೂರೈಸಿದರು.

ಈ ಮೂಲಕ ಅವರು 2005 ರಲ್ಲಿ ಶ್ರೀಲಂಕಾದ ದೇಶೀಯ ಲಿಸ್ಟ್ ಎ ಪಂದ್ಯದಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಕೌಶಲ್ಯ ವೀರರತ್ನೆ ಅವರ 20 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 16 ಎಸೆತಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ಹೊಂದಿರುವ ಎಬಿ ಡಿವಿಲಿಯರ್ಸ್ ಮತ್ತು ಮ್ಯಾಥ್ಯೂ ಫೋರ್ಡ್ ಅವರ ದಾಖಲೆಗಳನ್ನೂ ಸಹ ವೈಭವ್ ಸೂರ್ಯವಂಶಿ ಉಡೀಸ್ ಮಾಡಿದ್ದಾರೆ. ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ್ ಎ ನಡುವಿನ ಈ ಬಹುರಾಷ್ಟ್ರೀಯ ಟೂರ್ನಿಯ ಮೂಲಕ ದ್ವಿರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಹೆಗ್ಗಳಿಕೆಯೂ ಇವರ ಪಾಲಾಗಿದೆ. 

Category
ಕರಾವಳಿ ತರಂಗಿಣಿ