image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಫ್‌ಐಎಚ್ ಪ್ರೊ ಲೀಗ್: ಹಾಲಿ ವಿಶ್ವ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಭಾರತ, ಮನ್‌ಪ್ರೀತ್ ಸಿಂಗ್ ಹೊಸ ಇತಿಹಾಸ!

ಎಫ್‌ಐಎಚ್ ಪ್ರೊ ಲೀಗ್: ಹಾಲಿ ವಿಶ್ವ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಭಾರತ, ಮನ್‌ಪ್ರೀತ್ ಸಿಂಗ್ ಹೊಸ ಇತಿಹಾಸ!

ಹೈದರಾಬಾದ್ : ರೋಟರ್‌ಡ್ಯಾಮ್‌ನಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನ ತನ್ನ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಪುರುಷರ ಹಾಕಿ ತಂಡವು, ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು 3-1 ಗೋಲುಗಳ ಅಂತರದಿಂದ ರೋಚಕವಾಗಿ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತೀಯ ಹಾಕಿ ತಂಡವು ಟೂರ್ನಿಯಲ್ಲಿ ತನ್ನ ಬಲಿಷ್ಠ ಲಯವನ್ನು ಪ್ರದರ್ಶಿಸಿದೆ. ಭಾರತದ ಪರವಾಗಿ ಮಂದೀಪ್ ಸಿಂಗ್, ಶಿಲಾನಂದ್ ಲಾಕ್ರ ಮತ್ತು ನೀಲಕಂಠ ಶರ್ಮಾ ತಲಾ ಒಂದು ಗೋಲು ಗಳಿಸಿ ಜಯದ ರೂವಾರಿಗಳಾದರು. ಇಡೀ ಪಂದ್ಯದುದ್ದಕ್ಕೂ ಮಿಡ್‌ಫೀಲ್ಡ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಇಡೀ ಪಂದ್ಯವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡ ಹಾರ್ದಿಕ್ ಸಿಂಗ್ ಅವರಿಗೆ 'ಪಂದ್ಯಶ್ರೇಷ್ಠ' ಪ್ರಶಸ್ತಿ ಒಲಿಯಿತು.

ಈ ಪಂದ್ಯವು ಕೇವಲ ಭಾರತದ ಗೆಲುವಿಗೆ ಮಾತ್ರವಲ್ಲದೆ, ಭಾರತೀಯ ಹಾಕಿ ಇತಿಹಾಸದಲ್ಲೇ ಅತ್ಯಂತ ಸ್ಮರಣೀಯ ಕ್ಷಣಕ್ಕೂ ಸಾಕ್ಷಿಯಾಯಿತು. ಭಾರತ ತಂಡದ ಮಾಜಿ ನಾಯಕ ಮನ್‌ಪ್ರೀತ್ ಸಿಂಗ್ ಅವರು ದಿಗ್ಗಜ ಆಟಗಾರ ದಿಲೀಪ್ ಟಿರ್ಕಿ ಅವರ ಹೆಸರಲ್ಲಿದ್ದ 412 ಅಂತರರಾಷ್ಟ್ರೀಯ ಪಂದ್ಯಗಳ ದಾಖಲೆಯನ್ನು ಹಿಂದಿಕ್ಕಿ, ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದರು. ತಮ್ಮ 413ನೇ ಪಂದ್ಯವನ್ನು ಆಡಿದ ಮನ್‌ಪ್ರೀತ್ ಸಿಂಗ್, ಸದ್ಯ ವಿಶ್ವ ಹಾಕಿ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಬೆಲ್ಜಿಯಂನ ಜಾನ್-ಜಾನ್ ಡೊಹ್ಮೆನ್ (481 ಪಂದ್ಯಗಳು) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಭಾರತ ತಂಡವು ಜರ್ಮನಿ ಮೇಲೆ ಸವಾರಿ ಮಾಡಿತು. ಪಂದ್ಯದ 7ನೇ ನಿಮಿಷದಲ್ಲೇ ಮಂದೀಪ್ ಸಿಂಗ್ ಆಕರ್ಷಕ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಮೊದಲ ಕ್ವಾರ್ಟರ್ ಮುಗಿಯಲು ಇನ್ನು ಎರಡು ನಿಮಿಷ ಬಾಕಿ ಇದ್ದಾಗ (13ನೇ ನಿಮಿಷ), ಶಿಲಾನಂದ್ ಲಾಕ್ರ ಭಾರತದ ಪರ ಎರಡನೇ ಗೋಲು ಗಳಿಸಿ ಜರ್ಮನಿಯ ಆತಂಕ ಹೆಚ್ಚಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಜರ್ಮನಿ ತಂಡವು ತಿರುಗಿಬೀಳಲು ತೀವ್ರ ಪ್ರಯತ್ನ ನಡೆಸಿತಾದರೂ, ಭಾರತದ ಡಿಫೆಂಡರ್ ಅಮಿತ್ ರೋಹಿದಾಸ್ ಮತ್ತು ಗೋಲ್‌ಕೀಪರ್ ಮೋಹಿತ್ ಅವರ ತಡೆಗೋಡೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ದ್ವಿತೀಯಾರ್ಧದಲ್ಲೂ ಭಾರತ ತನ್ನ ಆಕ್ರಮಣಕಾರಿ ಧೋರಣೆಯನ್ನು ಮುಂದುವರಿಸಿತು. ಪಂದ್ಯದ 35ನೇ ನಿಮಿಷದಲ್ಲಿ ಜರ್ಮನ್ ರಕ್ಷಣಾ ವಿಭಾಗವನ್ನು ದಿಗ್ಭ್ರಮೆಗೊಳಿಸಿದ ನೀಲಕಂಠ ಶರ್ಮಾ, ಏಕಾಂಗಿಯಾಗಿ ಮುನ್ನುಗ್ಗಿ ಮೂರನೇ ಗೋಲು ಕಲೆಹಾಕಿದರು. ಇದರಿಂದ ಭಾರತ 3-0 ಭರ್ಜರಿ ಮುನ್ನಡೆ ಸಾಧಿಸಿತು. ಆದರೆ, ಮೂರನೇ ಕ್ವಾರ್ಟರ್ ಮುಗಿಯಲು ಕೇವಲ 20 ಸೆಕೆಂಡುಗಳು ಬಾಕಿ ಇರುವಾಗ ಜರ್ಮನಿಯ ರಾಫೆಲ್ ಹಾರ್ಟ್‌ಕೋಫ್ ಒಂದು ಗೋಲು ಗಳಿಸಿ ಹಿನ್ನಡೆಯನ್ನು 3-1ಕ್ಕೆ ತಗ್ಗಿಸಿದರು. ಅಂತಿಮ ಕ್ವಾರ್ಟರ್‌ನಲ್ಲಿ ಜರ್ಮನಿ ಪಂದ್ಯದ ವೇಗವನ್ನು ಹೆಚ್ಚಿಸಿ ಭಾರತದ ಮೇಲೆ ತೀವ್ರ ಒತ್ತಡ ಹೇರಿತು. ಪಂದ್ಯದ 59ನೇ ನಿಮಿಷದಲ್ಲಿ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ, ಭಾರತದ ಭದ್ರ ಕೋಟೆಯನ್ನು ಮುರಿಯಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ತಂಡವು 3-1 ಗೋಲುಗಳ ಐತಿಹಾಸಿಕ ಗೆಲುವಿನೊಂದಿಗೆ ಮೈದಾನದಲ್ಲಿ ಸಂಭ್ರಮಿಸಿತು.

Category
ಕರಾವಳಿ ತರಂಗಿಣಿ