ಹೊಸದಿಲ್ಲಿ : ಭಾರತದ ಹಿರಿಯ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರು ಸತತ ಏಳನೇ ಬಾರಿಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಐಎಸ್‌ಟಿಎ ಅಕಾಡೆಮಿಯಲ್ಲಿ ನಡೆದ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ, ಐದು ಗೇಮ್‌ಗಳ ಕಠಿಣ ಹಣಾಹಣಿಯಲ್ಲಿ ಉನ್ನತಿ ತ್ರಿಪಾಠಿ ಅವರನ್ನು ಮಣಿಸಿದ 39 ವರ್ಷದ ಜೋಶ್ನಾ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು. ಮಿತಿಕಾ ಸೀಲನ್, ಅಕ್ಷಾಂಶ ಸಾಲುಂಕೆ, ಉನ್ನತಿ ಹಾಗೂ ಪೂಜಾ ಆರತಿ ಅವರನ್ನೊಳಗೊಂಡ ಪ್ರತಿಭಾವಂತ ಯುವ ಆಟಗಾರ್ತಿಯರ ಗುಂಪಿನಿಂದ ಜೋಶ್ನಾ ಈ ಟ್ರಯಲ್ಸ್‌ನಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸಿದ್ದರು.
ಈ ಕುರಿತು ಮಾತನಾಡಿದ ನಾಲ್ಕು ಬಾರಿಯ ಏಷ್ಯನ್ ಚಾಂಪಿಯನ್ ಜೋಶ್ನಾ, ಒಂದೇ ದಿನ ಎರಡು ಪಂದ್ಯಗಳನ್ನು ಆಡುವುದು ಕಷ್ಟಕರ, ಸಾಮಾನ್ಯವಾಗಿ ದಿನಕ್ಕೆ ಒಂದು ಪಂದ್ಯ ಇರುತ್ತದೆ ಎಂದು ತಿಳಿಸಿದರು. ಮಿತಿಕಾ, ಪೂಜಾ ಹಾಗೂ ಇತರ ಆಟಗಾರ್ತಿಯರು ಇಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ ಎಂದ ಅವರು, ತಾವು ಎಲ್ಲಾ ಪಂದ್ಯಗಳನ್ನು ಗೆಲ್ಲಲು ಬಯಸಿದ್ದು, ತಮ್ಮ ಪ್ರದರ್ಶನದ ಬಗ್ಗೆ ಖುಷಿಯಿದೆ ಎಂದು ಹೇಳಿದರು. ಜೊತೆಗೆ, ಭಾರತವನ್ನು ಏಷ್ಯನ್ ಗೇಮ್ಸ್‌ನಲ್ಲಿ ಪ್ರತಿನಿಧಿಸುವುದು ಒಂದು ವಿಶೇಷ ಅನುಭವ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.