image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ವಿಸ್ತರಣೆ: ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಹತ್ವದ ಘೋಷಣೆ

ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ವಿಸ್ತರಣೆ: ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಹತ್ವದ ಘೋಷಣೆ

ಬೆಳಗಾವಿ: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈದಾನದ ಪ್ರೇಕ್ಷಕರ ಸಾಮರ್ಥ್ಯವನ್ನು 55 ಸಾವಿರಕ್ಕೆ ಏರಿಸುವ ಮಹತ್ವದ ಯೋಜನೆ ರೂಪಿಸಲಾಗಿದೆ ಎಂದು ಘೋಷಿಸಿದರು. ಈ ಕುರಿತು ವಿವರ ನೀಡಿದ ವೆಂಕಟೇಶ್ ಪ್ರಸಾದ್, ಈಡನ್ ಗಾರ್ಡನ್, ವಾಂಖೆಡೆ ಮತ್ತು ನರೇಂದ್ರ ಮೋದಿ ಕ್ರೀಡಾಂಗಣಗಳಂತಹ ಪ್ರಮುಖ ಮೈದಾನಗಳಿಗೆ ಹೋಲಿಸಿದರೆ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಸೌಕರ್ಯಗಳು ಸುಧಾರಣೆಯಾಗಬೇಕಿದೆ. ಸದ್ಯ ಮೈದಾನದಲ್ಲಿ 360 ಡಿಗ್ರಿ ವೀಕ್ಷಣೆ ಸಾಧ್ಯವಿಲ್ಲ, ಅಲ್ಲದೆ ಪ್ರೇಕ್ಷಕರ ಆಸನ ವ್ಯವಸ್ಥೆ ಮತ್ತು ಡಗೌಟ್ ಕಾಣದಿರುವ ಸಮಸ್ಯೆಗಳಿವೆ. ಸದ್ಯದ 32 ಸಾವಿರ ಸಾಮರ್ಥ್ಯದ ಮೈದಾನದಲ್ಲಿ ಪಾಸ್‌ಗಳನ್ನು ಹೊರತುಪಡಿಸಿದರೆ ಕೇವಲ 20 ಸಾವಿರ ಮಂದಿ ಮಾತ್ರ ಪಂದ್ಯ ವೀಕ್ಷಿಸಲು ಸಾಧ್ಯವಾಗುತ್ತಿದೆ. ಇದನ್ನು 55 ಸಾವಿರಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದ ನೆರವನ್ನು ಕೋರಿದ್ದೇವೆ ಎಂದು ವಿವರಿಸಿದರು.

ಅಕ್ಟೋಬರ್ ತಿಂಗಳಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಡಿಸೆಂಬರ್‌ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ತಮ್ಮ ತಂಡದ ಪರಿಶ್ರಮದಿಂದಲೇ ಬೆಂಗಳೂರಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ತರಲು ಸಾಧ್ಯವಾಗಿದೆ ಎಂದ ಅವರು, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಂತಹ ದಿಗ್ಗಜರ ಸಹಕಾರವನ್ನು ಸ್ಮರಿಸಿದರು. ಬೆಳಗಾವಿ ಕ್ರಿಕೆಟ್ ಕುರಿತು ಮಾತನಾಡಿದ ಅವರು, ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಯೋಜಿಸಲು ಲಾಜಿಸ್ಟಿಕ್ ಸಮಸ್ಯೆಗಳಿವೆ. ಆದರೆ ಬಿಸಿಸಿಐನ ದೇಶೀಯ ಪಂದ್ಯಗಳು ಮತ್ತು ಅಭ್ಯಾಸ ಪಂದ್ಯಗಳನ್ನು ಇಲ್ಲಿ ನಡೆಸಲು ಆಸಕ್ತಿ ಇದೆ ಎಂದರು. ಮುಂದಿನ ದಿನಗಳಲ್ಲಿ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ಅದರಲ್ಲಿ ಬೆಳಗಾವಿ ತಂಡವನ್ನು ಸೇರ್ಪಡೆಗೊಳಿಸುವ ಆಶಯವನ್ನು ಅವರು ವ್ಯಕ್ತಪಡಿಸಿದರು. ಆನೇಕಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಮೈದಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಸುದ್ದಿಗೋಷ್ಠಿಯ ನಂತರ ವೆಂಕಟೇಶ್ ಪ್ರಸಾದ್ ಅವರು ಬೆಳಗಾವಿಯ ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಟ್ಟರು. ಈ ಸಂದರ್ಭದಲ್ಲಿ ವಿ.ಎನ್.ಪಾಟೀಲ, ಅವಿನಾಶ್ ಪೋತದಾರ, ವಿಲಾಸ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ