image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅದ್ಧೂರಿ ಚಾಲನೆ ಪಡೆದ ಫಿಫಾ ವಿಶ್ವಕಪ್ 2026: ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊಗೆ ಭರ್ಜರಿ ಜಯ

ಅದ್ಧೂರಿ ಚಾಲನೆ ಪಡೆದ ಫಿಫಾ ವಿಶ್ವಕಪ್ 2026: ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊಗೆ ಭರ್ಜರಿ ಜಯ

ಮೆಕ್ಸಿಕೋ : ವಿಶ್ವದ ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಫಿಫಾ ವಿಶ್ವಕಪ್​ 2026ರ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಂಗೀತ, ನೃತ್ಯ, ಬೆಳಕುಗಳೊಂದಿಗೆ ವೈಭವಯುತವಾಗಿ ನಡೆದ ಉದ್ಘಾಟನಾ ಸಮಾರಂಭವು ಕ್ರೀಡಾಭಿಮಾನಿಗಳ ಕಣ್ಮನ ಸೆಳೆದಿದೆ, ಆತಿಥೇಯ ಮೆಕ್ಸಿಕೊ ರಾಷ್ಟ್ರ ತನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿತು. ವಿಶ್ವ ಫುಟ್ಬಾಲ್ ಹಬ್ಬದ ಆರಂಭಕ್ಕೆ ಸಾಕ್ಷಿಯಾದ ಈ ಸಮಾರಂಭವು ಪಂದ್ಯಾವಳಿಯ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಮೆಕ್ಸಿಕೊ ನಗರದ ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ 2026ರ ಫಿಫಾ ವಿಶ್ವಕಪ್​ಗೆ ವೈಭವಯುತವಾಗಿ ಚಾಲನೆ ಸಿಕ್ಕಿತು.

ಫಿಫಾ ವಿಶ್ವಕಪ್​ ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಮತ್ತು ಜಾಗತಿಕ ಸಂಗೀತ ತಾರೆಗಳಾದ ಶಕೀರಾ, ಬರ್ನಾ ಬಾಯ್ ಹಾಗೂ ಜೆ ಬಾಲ್ವಿನ್ ಅವರ ಅದ್ಭುತ ಪ್ರದರ್ಶನಗಳು ಇಡೀ ಕ್ರೀಡಾಂಗಣಕ್ಕೆ ಮೆರುಗು ನೀಡಿದವು. ಬೃಹತ್​ ಆಕಾರದ ಫಿಫಾ ವಿಶ್ವಕಪ್​ ಪ್ರತಿಕೃತಿ ಪ್ರದರ್ಶನದ ವೇಳೆ ಕಂಡು ಬಂದ ಅದ್ಭುತವಾದ ದೃಶ್ಯಗಳು ಮತ್ತು ಭಾಗಿಯಾಗುತ್ತಿರುವ ರಾಷ್ಟ್ರಗಳ ಧ್ವಜಗಳ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು. ಈ ಫುಟ್ಬಾಲ್ ಹಬ್ಬದ ಸಂಭ್ರಮವು ಕೇವಲ ಆತಿಥೇಯ ರಾಷ್ಟ್ರಗಳಲ್ಲದೆ, ಭಾರತದ ಕೇರಳದಲ್ಲೂ ಜೋರಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳ ಜೆರ್ಸಿ ಧರಿಸಿ ಫೋಟೊಗೆ ಪೋಸ್​ ನೀಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಉದ್ಘಾಟನಾ ಸಮಾರಂಭದ ಬೆನ್ನಲ್ಲೇ ನಡೆದ ರೋಮಾಂಚಕ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೆಕ್ಸಿಕೊ ಪರ ಜೂಲಿಯನ್ ಕ್ವಿನೋನ್ಸ್ 9ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಅನುಭವಿ ಆಟಗಾರ ರಾವುಲ್ ಜಿಮೆನೆಜ್ 67ನೇ ನಿಮಿಷದಲ್ಲಿ ಹೆಡರ್ ಮೂಲಕ ಎರಡನೇ ಗೋಲು ಬಾರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಒಟ್ಟು ಮೂರು ರೆಡ್ ಕಾರ್ಡ್‌ಗಳನ್ನು ಪ್ರದರ್ಶಿಸಲಾಯಿತು; ದಕ್ಷಿಣ ಆಫ್ರಿಕಾದ ಇಬ್ಬರು ಹಾಗೂ ಮೆಕ್ಸಿಕೊದ ಒಬ್ಬ ಆಟಗಾರ ಕೆಂಪು ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. 80,000ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಮೆಕ್ಸಿಕೊ ಜಯಭೇರಿ ಬಾರಿಸುವುದರೊಂದಿಗೆ ವಿಶ್ವಕಪ್ ಮಹಾಸಮರಕ್ಕೆ ಅಧಿಕೃತ ಮುನ್ನುಡಿ ಬರೆಯಲಾಗಿದೆ.

Category
ಕರಾವಳಿ ತರಂಗಿಣಿ