image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಪಿ.ವಿ. ಸಿಂಧು, ತನ್ವಿ ಶರ್ಮಾ

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಪಿ.ವಿ. ಸಿಂಧು, ತನ್ವಿ ಶರ್ಮಾ

ಸಿಡ್ನಿ : ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಯುವ ಆಟಗಾರ್ತಿ ತನ್ವಿ ಶರ್ಮಾ ಅವರು ಗುರುವಾರ ತಮ್ಮ ಎದುರಾಳಿಗಳ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಜಯಶಾಲಿಯಾಗಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮೂರನೇ ಶ್ರೇಯಾಂಕದ ಸಿಂಧು ಅವರು 42 ನಿಮಿಷಗಳ ಕಾಲ ನಡೆದ ಅಂತಿಮ-16ರ ಪಂದ್ಯದಲ್ಲಿ ತಮ್ಮದೇ ದೇಶದ ಇಶಾರಾಣಿ ಬರುವಾರನ್ನು 22-20, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಸಿಂಧು ಅವರು ಚೈನೀಸ್ ತೈಪೆಯ ಚೆನ್ ಸು ಯು ಅವರನ್ನು ಎದುರಿಸಲಿದ್ದಾರೆ.

​ಇಬ್ಬರು ಭಾರತೀಯರ ನಡುವೆ ನಡೆದ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 17ರ ಹರೆಯದ ತನ್ವಿ ಶರ್ಮಾ ಅವರು ಮಾಳವಿಕಾ ಬನ್ಸೋಡ್‌ರನ್ನು 21-13, 21-15 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ತನ್ವಿ ಬುಧವಾರ ಚೈನೀಸ್ ತೈಪೆಯ ಇದೇ ಶ್ರೇಯಾಂಕದ ಹಾಗೂ ವಿಶ್ವದ ನಂ.11ನೇ ಆಟಗಾರ್ತಿ ಚಿಯು ಪಿನ್-ಚಿಯಾನ್‌ರನ್ನು ಮಣಿಸಿ ಶಾಕ್ ನೀಡಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ತನ್ವಿಗೆ ಕಠಿಣ ಪಂದ್ಯ ಎದುರಾಗಲಿದ್ದು, ಅವರು ಜಪಾನ್ನ ಅಗ್ರ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ. ಆದರೆ, ಪುರುಷರ ಸಿಂಗಲ್ಸ್‌ನಲ್ಲಿ ತನ್ವಿ ಹೇಮಂತ್ ಸವಾಲು ಅಂತ್ಯವಾಗಿದ್ದು, ಅವರು ಥಾಯ್ಲೆಂಡ್‌ನ ಎರಡನೇ ಶ್ರೇಯಾಂಕದ ಪ್ರೋನ್ಪಾವೀ ಚೋಚುವಾಂಗ್ ವಿರುದ್ಧ 12-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಜೋಡಿ ಮೈಕಲ್ ಓವೆನ್ ಹಾಗೂ ಡಿಲಾನ್ ಸೊಯ್‌ಜಾಸಾ ವಿರುದ್ಧ 21-17, 21-7 ಗೇಮ್‌ಗಳ ಅಂತರದಿಂದ ಜಯಶಾಲಿಯಾಗಿರುವ ಭಾರತದ ಹರಿಹರನ್ ಹಾಗೂ ಎಂ.ಆರ್. ಅರ್ಜುನ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಹರಿಹರನ್ ಹಾಗೂ ಅರ್ಜುನ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಚೆನ್ ಚೆಂಗ್ ಕುವಾನ್ ಹಾಗೂ ಲಿಯು ಕುವಾಂಗ್ ಹೆಂಗ್‌ರನ್ನು ಎದುರಿಸಲಿದ್ದಾರೆ. ಆದರೆ ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿ ಧ್ರುವ ರಾವತ್ ಹಾಗೂ ಕೆ.ಮನೀಶಾ ಅವರು ಜಪಾನಿನ ಅಕಿರಾ ಕೋಗಾ ಹಾಗೂ ನಾಟ್ಸು ಸೈತೋರನ್ನು ಎದುರಿಸಿದ ಎರಡನೇ ಸುತ್ತಿನ ಪಂದ್ಯದಲ್ಲಿ ಮಣಿದು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

Category
ಕರಾವಳಿ ತರಂಗಿಣಿ