image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

28 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ಗೆ ನಾರ್ವೆ ಲಗ್ಗೆ: ಆಟಗಾರರ ಫಿಟ್‌ನೆಸ್‌ಗಾಗಿ ಅಮೆರಿಕಕ್ಕೆ ಹಾರಿತು 1 ಟನ್ ದೇಶಿ ಆಹಾರ!

28 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ಗೆ ನಾರ್ವೆ ಲಗ್ಗೆ: ಆಟಗಾರರ ಫಿಟ್‌ನೆಸ್‌ಗಾಗಿ ಅಮೆರಿಕಕ್ಕೆ ಹಾರಿತು 1 ಟನ್ ದೇಶಿ ಆಹಾರ!

ಅಮೇರಿಕ : ಫಿಫಾ ವಿಶ್ವಕಪ್ 2026ರ ಮಹಾಸಮರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆಯ 48 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಈ ಬಾರಿಯ ಜಾಗತಿಕ ಟೂರ್ನಿಗೆ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಿದ್ದು, ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ನಡುವೆ, ಬರೋಬ್ಬರಿ 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ವಿಶ್ವಕಪ್ ಆಡಲು ಅರ್ಹತೆ ಪಡೆದಿರುವ ನಾರ್ವೆ ದೇಶದ ಫುಟ್‌ಬಾಲ್ ತಂಡವು ತನ್ನ ಆಟಗಾರರ ಫಿಟ್‌ನೆಸ್ ಕಾಯ್ದುಕೊಳ್ಳಲು ಕೈಗೊಂಡಿರುವ ವಿಶಿಷ್ಟ ಕ್ರಮದಿಂದಾಗಿ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ನಾರ್ವೆ ಕೊನೆಯದಾಗಿ 1998ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿತ್ತು. ಈಗ ಸುಮಾರು ಮೂರು ದಶಕಗಳ ನಂತರ ಮೈದಾನಕ್ಕಿಳಿಯುತ್ತಿರುವ ನಾರ್ವೆ ತಂಡವು ತನ್ನ ಆಟಗಾರರ ಆಹಾರ ಕ್ರಮ (ಡಯಟ್) ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದೆ. ಅಮೆರಿಕದ ವಿಭಿನ್ನ ಹವಾಮಾನದಲ್ಲಿ ಆಟಗಾರರು ಸಂಪೂರ್ಣವಾಗಿ ಫಿಟ್ ಆಗಿರಲು ಮತ್ತು ಅವರಿಗೆ ನಿರಂತರವಾಗಿ ಶಕ್ತಿ ಒದಗಿಸಲು ನಾರ್ವೆಯ ಫುಟ್‌ಬಾಲ್ ಅಸೋಸಿಯೇಷನ್ ತನ್ನ ತಾಯ್ನಾಡಿನ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನೇ ಆಟಗಾರರಿಗೆ ನೀಡಲು ನಿರ್ಧರಿಸಿದೆ. ಇದಕ್ಕಾಗಿ ನಾರ್ವೆಯಿಂದ ಬರೋಬ್ಬರಿ 1 ಟನ್‌ಗಿಂತಲೂ (1,000 ಕೆಜಿ) ಹೆಚ್ಚು ತೂಕದ ಆಹಾರ ಪದಾರ್ಥಗಳನ್ನು ವಿಶೇಷ ವಿಮಾನದ ಮೂಲಕ ಅಮೆರಿಕದಲ್ಲಿರುವ ತಂಡದ ತರಬೇತಿ ಶಿಬಿರಕ್ಕೆ ರವಾನಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕ ತಲುಪಿರುವ ಈ ದೈತ್ಯ ಫುಡ್ ಶಿಪ್‌ಮೆಂಟ್‌ನಲ್ಲಿ ನಾರ್ವೆಯ ಪ್ರಸಿದ್ಧ 116 ಕಿಲೋಗ್ರಾಂ ತೂಕದ 'ಬ್ರೂನೋಸ್ಟ್ ಚೀಸ್', 300 ಕೆಜಿ ತೂಕದ ಸಾಂಪ್ರದಾಯಿಕ 'ಕೆಂಪು ಮೀನು' (ರೆಡ್ ಸ್ಯಾಮನ್ ಫಿಶ್) ಹಾಗೂ ಬರೋಬ್ಬರಿ 6,000 ಕಿತ್ತಳೆ ಹಣ್ಣುಗಳು ಸೇರಿವೆ. ಮ್ಯಾಂಚೆಸ್ಟರ್ ಸಿಟಿಯ ಸ್ಟಾರ್ ಸ್ಟ್ರೈಕರ್ ಅರ್ಲಿಂಗ್ ಹಾಲೆಂಡ್ ಮತ್ತು ಆರ್ಸೆನಲ್ ತಂಡದ ನಾಯಕ ಮಾರ್ಟಿನ್ ಒಡೆಗಾರ್ಡ್ ಸೇರಿದಂತೆ ಇಡೀ ತಂಡಕ್ಕೆ ವಿದೇಶಿ ಮಣ್ಣಿನಲ್ಲೂ ಮನೆಯೂಟದ ಸವಿ ಸಿಗುವಂತೆ ಮಾಡಲು ನಾರ್ವೆಯ ಪ್ರಸಿದ್ಧ ಶೆಫ್‌ಗಳನ್ನು ಸಹ ತಂಡದ ಜೊತೆ ಕಳುಹಿಸಿಕೊಡಲಾಗಿದೆ.

ವಿದೇಶಗಳಲ್ಲಿ ದೀರ್ಘಕಾಲದವರೆಗೆ ನಡೆಯುವ ಇಂತಹ ದೊಡ್ಡ ಮೆಗಾ ಟೂರ್ನಿಗಳಲ್ಲಿ ಆಟಗಾರರ ದಿನಚರಿ, ನಿದ್ದೆ ಮತ್ತು ಆಹಾರ ಕ್ರಮದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇದರಿಂದ ಆಟಗಾರರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ತಡೆಯಲು ಈ ವಿಶಿಷ್ಟ ದೇಶಿ ಆಹಾರ ಯೋಜನೆಯನ್ನು ರೂಪಿಸಲಾಗಿದೆ ಎಂದು ತಂಡದ ಡಯಟೀಷಿಯನ್ಸ್ ತಿಳಿಸಿದ್ದಾರೆ. ಈ ಬಾರಿ ಫ್ರಾನ್ಸ್, ಸೆನೆಗಲ್ ಮತ್ತು ಇರಾಕ್ ತಂಡಗಳಿರುವ ಕಠಿಣ ಗ್ರೂಪ್‌ನಲ್ಲಿ ಸ್ಥಾನ ಪಡೆದಿರುವ ನಾರ್ವೆ, ತನ್ನ ಸ್ಟಾರ್ ಆಟಗಾರರ ಬಲ ಹಾಗೂ ಈ ವಿಶೇಷ ಸಿದ್ಧತೆಗಳೊಂದಿಗೆ ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

Category
ಕರಾವಳಿ ತರಂಗಿಣಿ