ಪ್ಯಾರಿಸ್ : ಫುಟ್‌ಬಾಲ್ ಇತಿಹಾಸದಲ್ಲೇ ಅತಿ ದೊಡ್ಡ ವಿಶ್ವಕಪ್ ಟೂರ್ನಿಗೆ ಫಿಫಾ ಭರ್ಜರಿ ಬಹುಮಾನದ ಮೊತ್ತವನ್ನು ಘೋಷಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಈ ಫುಟ್‌ಬಾಲ್ ಹಬ್ಬದಲ್ಲಿ ಈ ಬಾರಿ ದಾಖಲೆಯ 48 ತಂಡಗಳು ಕಣಕ್ಕಿಳಿಯುತ್ತಿದ್ದು, ತಂಡಗಳ ಸಂಖ್ಯೆ ಹೆಚ್ಚಾದಂತೆ ಬಹುಮಾನದ ಮೊತ್ತವನ್ನೂ ಫಿಫಾ ಗಣನೀಯವಾಗಿ ಹೆಚ್ಚಿಸಿದೆ. ಈ ಬಾರಿ ಒಟ್ಟು ₹6,238.42 ಕೋಟಿ ರೂಪಾಯಿ ಬಹುಮಾನದ ಹಣವನ್ನು ಫಿಫಾ ನೀಡಲಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಇತರೆ ಖರ್ಚುಗಳನ್ನು ಸೇರಿಸಿದರೆ, ಒಟ್ಟು ಮೊತ್ತ ₹7,400 ಕೋಟಿಗೂ ಹೆಚ್ಚು ಆಗಲಿದೆ.
ಈ ಬಾರಿ ವಿಶ್ವ ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ ₹417.50 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಇದು ಕಳೆದ ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾಗೆ ಸಿಕ್ಕಿದ್ದಕ್ಕಿಂತ ₹76 ಕೋಟಿ ರೂಪಾಯಿ ಹೆಚ್ಚಾಗಿದೆ. ಇನ್ನು ರನ್ನರ್ ಅಪ್ ಆಗಿ ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹288 ಕೋಟಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ ₹254.675 ಕೋಟಿ ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡುವ ತಂಡಕ್ಕೆ ₹237 ಕೋಟಿ ರೂಪಾಯಿ ಸಿಗಲಿದೆ. ಕ್ವಾರ್ಟರ್ ಫೈನಲ್ ಮತ್ತು ಪ್ರೀ-ಕ್ವಾರ್ಟರ್ ಫೈನಲ್ ಹಂತ ತಲುಪಿದ ತಂಡಗಳಿಗೂ ಭರ್ಜರಿ ಹಣ ಸಿಗಲಿದೆ. ಇನ್ನು ವಿಶ್ವಕಪ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ಕನಿಷ್ಠ ₹87.5 ಕೋಟಿ ಸಿಗುವುದು ಗ್ಯಾರಂಟಿಯಾಗಿದ್ದು, ಇದು ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳಲು ನೀಡುವ ಹಣವನ್ನು ಹೊರತುಪಡಿಸಿ ಸಿಗುವ ಮೊತ್ತವಾಗಿದೆ.
ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಮೂರು ದೇಶಗಳಿಂದ ಬೃಹತ್ ಪ್ರಾಯೋಜಕತ್ವ ಸಿಕ್ಕಿದ್ದರಿಂದ ಫಿಫಾದ ಆದಾಯವೂ ಗಣನೀಯವಾಗಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಭಾಗವಹಿಸುವ ತಂಡಗಳಿಗೂ ಹೆಚ್ಚಿನ ಬಹುಮಾನ ನೀಡಲು ಫಿಫಾ ನಿರ್ಧರಿಸಿದೆ. ಆದರೆ ಫಿಫಾ ಈ ಹಣವನ್ನು ನೇರವಾಗಿ ಆಟಗಾರರ ಖಾತೆಗೆ ಹಾಕುವುದಿಲ್ಲ. ಬದಲಿಗೆ, ಪ್ರತಿ ದೇಶದ ಫುಟ್‌ಬಾಲ್ ಅಸೋಸಿಯೇಷನ್‌ಗಳಿಗೆ ಈ ಹಣವನ್ನು ವರ್ಗಾಯಿಸುತ್ತದೆ. ಈ ಹಣವನ್ನು ಆಯಾ ಸಂಸ್ಥೆಗಳು ಆಟಗಾರರಿಗೆ ಬೋನಸ್ ನೀಡಲು, ಕೋಚಿಂಗ್ ಸಿಬ್ಬಂದಿ ಸಂಬಳ, ಪ್ರಯಾಣದ ಖರ್ಚು ಮತ್ತು ತಮ್ಮ ದೇಶೀಯ ಫುಟ್‌ಬಾಲ್ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.