ಚೆನ್ನೈ : ಪುರುಷರ ಹಾಕಿ ಅಂಡರ್-18 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಜಪಾನ್‌ನ ಕಾಕಾಮಿಗಹರಾ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು 4–1 ಗೋಲುಗಳ ಅಂತರದಿಂದ ಮಣಿಸಿದ ಭಾರತ ಪುರುಷರ ತಂಡವು, ದಾಖಲೆಯ ಮೂರನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾರತದ ಗೆಲುವಿನಲ್ಲಿ ಆಶಿಶ್ ಪುತ್ರಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ 2ನೇ, 28ನೇ ಮತ್ತು 34ನೇ ನಿಮಿಷಗಳಲ್ಲಿ ಸತತ ಗೋಲುಗಳನ್ನು ಬಾರಿಸುವ ಮೂಲಕ ಆಶಿಶ್ ಅದ್ಭುತ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರೊಂದಿಗೆ ನಾಯಕ ಕೇತನ್ ಕುಶ್ವಾಹಾ ಅವರು 30ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಆತಿಥೇಯ ಜಪಾನ್ ಪರ ಗಕು ನುಮಾದ (52ನೇ ನಿಮಿಷ) ಏಕೈಕ ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡರು.
ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಆಶಿಶ್ ಪುತ್ರಿ ಫೈನಲ್‌ನಲ್ಲಿ ತೋರಿದ ಶ್ರೇಷ್ಠ ಪ್ರದರ್ಶನಕ್ಕೆ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾಗಿದ್ದಲ್ಲದೆ, ಇಡೀ ಪಂದ್ಯಾವಳಿಯಲ್ಲಿ ಒಟ್ಟು 13 ಗೋಲುಗಳನ್ನು ಗಳಿಸುವ ಮೂಲಕ 'ಅಗ್ರ ಸ್ಕೋರರ್' ಆಗಿ ಹೊರಹೊಮ್ಮಿದ್ದಾರೆ. ಭಾರತ ತಂಡದ ಆಯುಷ್ ರಜಕ್ ಸರಣಿಯ 'ಶ್ರೇಷ್ಠ ಗೋಲ್‌ಕೀಪರ್' ಗೌರವಕ್ಕೆ ಪಾತ್ರರಾಗಿದ್ದಾರೆ.
ಮಹಿಳಾ ತಂಡಕ್ಕೆ ಕಂಚಿನ ಪದಕ:
ಮತ್ತೊಂದೆಡೆ, ಭಾರತೀಯ ಮಹಿಳೆಯರ ಅಂಡರ್-18 ಹಾಕಿ ತಂಡವು ದಕ್ಷಿಣ ಕೊರಿಯಾ ತಂಡವನ್ನು 3–0 ಗೋಲುಗಳ ಅಂತರದಿಂದ ಮಣಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಮಹಿಳಾ ವಿಭಾಗದ ಪಂದ್ಯಾವಳಿಯಲ್ಲಿ ಭಾರತದ ನೌಶೀನ್ ನಾರುಖ್ ಒಟ್ಟು 12 ಗೋಲುಗಳೊಂದಿಗೆ ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ. ಚಿನ್ನದ ಪದಕ ವಿಜೇತ ಭಾರತದ ಅಂಡರ್-18 ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 3 ಲಕ್ಷ ರೂಪಾಯಿ ಹಾಗೂ ಪ್ರತಿಯೊಬ್ಬ ಸಹಾಯಕ ಸಿಬ್ಬಂದಿಗೆ ತಲಾ 1.5 ಲಕ್ಷ ರೂಪಾಯಿ ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ಅದೇ ರೀತಿ, ಕಂಚಿನ ಪದಕ ಗೆದ್ದ ಮಹಿಳಾ ಹಾಕಿ ತಂಡದ ಪ್ರತಿ ಸದಸ್ಯರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ. ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಭಾರತೀಯ ತಂಡಗಳು ಅಪ್ರತಿಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದಿವೆ.