ರೋಮ್ : ಇಟಲಿಯ ರೋಮ್‌ನಲ್ಲಿ ನಡೆದ ಪ್ರತಿಷ್ಠಿತ ವಾಂಡಾ ಡೈಮಂಡ್ ಲೀಗ್ ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಶ್ರೀಲಂಕಾದ ರುಮೇಶ್ ಪತಿರಗೆ ಅವರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಬರೋಬ್ಬರಿ 92.62 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ತಮ್ಮ ಚೊಚ್ಚಲ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದು 2024ರ ಒಲಿಂಪಿಕ್ಸ್ ಬಳಿಕ ಜಾಗತಿಕ ಮಟ್ಟದಲ್ಲಿ ದಾಖಲಾದ ಅತ್ಯುತ್ತಮ ಪ್ರದರ್ಶನ ಎಂದು ಗುರುತಿಸಲ್ಪಟ್ಟಿದೆ. ಈ ಐತಿಹಾಸಿಕ ಸಾಧನೆಯೊಂದಿಗೆ ರುಮೇಶ್ ಪತಿರಗೆ ಅವರು ಏಷ್ಯಾದಲ್ಲೇ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತಗಾರನಾಗಿ ಹೊರಹೊಮ್ಮಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಅವರ 90.23 ಮೀಟರ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ಈ ಪಟ್ಟಿಯಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ (92.97 ಮೀಟರ್) ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ, ಪತಿರಗೆ ಅವರು 20 ವರ್ಷಗಳ ಹಳೆಯದಾದ ಕೂಟದ ದಾಖಲೆಯನ್ನು ಎರಡು ಮೀಟರ್‌ಗಿಂತಲೂ ಹೆಚ್ಚಿನ ಅಂತರದಿಂದ ಮುರಿದು, 90 ಮೀಟರ್ ಗಡಿ ದಾಟಿದ ವಿಶ್ವದ 28ನೇ ಹಾಗೂ ಏಷ್ಯಾದ 4ನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಆಂಡರ್ಸನ್ ಪೀಟರ್ಸ್ (83.91 ಮೀಟರ್) ಹಾಗೂ ತೃತೀಯ ಸ್ಥಾನವನ್ನು ಕರ್ಟಿಸ್ ಥಾಂಪ್ಸನ್ (83.89 ಮೀಟರ್) ಪಡೆದುಕೊಂಡರು.
ಭಾರತದ ಸಚಿನ್ ಯಾದವ್‌ಗೆ ನಿರಾಸೆ:
ಇದೇ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಭಾರತದ ಭರವಸೆಯ ಆಟಗಾರ ಸಚಿನ್ ಯಾದವ್ ಅವರು ಕೇವಲ 79.18 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕಳೆದ ವರ್ಷ ಟೋಕಿಯೋ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 86.27 ಮೀಟರ್ ಎಸೆದು 4ನೇ ಸ್ಥಾನ ಪಡೆದಿದ್ದ 26 ವರ್ಷದ ಸಚಿನ್, ಅಂದು ನೀರಜ್ ಚೋಪ್ರಾ ಅವರನ್ನೇ ಹಿಂದಿಕ್ಕಿದ್ದರು. ಆ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 84.03 ಮೀಟರ್ ಎಸೆತದೊಂದಿಗೆ 8ನೇ ಸ್ಥಾನ ಪಡೆದಿದ್ದರು. ಆದರೆ ಈ ಬಾರಿಯ ರೋಮ್ ಕ್ರೀಡಾಕೂಟದಲ್ಲಿ ಸಚಿನ್ ಯಾದವ್ ತಮ್ಮ ಹಳೆಯ ಲಯವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.