ನವದೆಹಲಿ : ನಾರ್ವೆ ಚೆಸ್ 2026 ಪಂದ್ಯಾವಳಿಯಲ್ಲಿ ಭಾರತದ ಯುವ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಭರ್ಜರಿ ಇತಿಹಾಸ ನಿರ್ಮಿಸಿದ್ದಾರೆ. ಕ್ಲಾಸಿಕಲ್ ಗೇಮ್‌ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ. 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿ ಮಣಿಸುವ ಮೂಲಕ ಪ್ರಜ್ಞಾನಂದ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಅದ್ಭುತ ಗೆಲುವಿನ ಮುಖೇನ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಪ್ರಜ್ಞಾನಂದ ಅವರು ಭಾರತದ ಮೊಟ್ಟಮೊದಲ ಚಾಂಪಿಯನ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಅಷ್ಟೇ ಅಲ್ಲದೆ, ಪ್ರಸಕ್ತ ವರ್ಷದ ಕ್ಲಾಸಿಕಲ್ ಚೆಸ್ ಪಂದ್ಯಾವಳಿಯಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡರಡು ಬಾರಿ ಮಣಿಸಿದ ವಿಶ್ವದ ಮೊದಲ ಆಟಗಾರ ಹಾಗೂ ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ 20 ವರ್ಷದ ಪ್ರಜ್ಞಾನಂದ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ನಡೆದಿದ್ದ ಟೂರ್ನಿಯ ಮೂರನೇ ಸುತ್ತಿನಲ್ಲೂ ನಾರ್ವೆಯ ದಿಗ್ಗಜ ಆಟಗಾರ ಕಾರ್ಲ್‌ಸನ್‌ಗೆ ಪ್ರಜ್ಞಾನಂದ ಸೋಲಿನ ರುಚಿ ತೋರಿಸಿದ್ದರು. ಇದರೊಂದಿಗೆ 35 ವರ್ಷದ ಕಾರ್ಲ್‌ಸನ್ ಅವರನ್ನು ಕ್ಲಾಸಿಕಲ್ ಚೆಸ್‌ನಲ್ಲಿ ಮೂರು ಬಾರಿ ಸೋಲಿಸಿದ ಜಗತ್ತಿನ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಈಗ ಭಾರತದ ಯುವ ತಾರೆ ಸೇರ್ಪಡೆಯಾಗಿದ್ದಾರೆ. ಪಂದ್ಯ ಮುಗಿದ ಬಳಿಕ ತೀವ್ರ ನಿರಾಶೆಗೆ ಒಳಗಾದ ಮ್ಯಾಗ್ನಸ್ ಕಾರ್ಲ್‌ಸನ್, ಪ್ರಜ್ಞಾನಂದ ಅವರ ಕೈಕುಲುಕಿ ಅಲ್ಲಿಂದ ನಿರ್ಗಮಿಸಿದರು.
ಈ ರೋಚಕ ಗೆಲುವಿನೊಂದಿಗೆ ಒಟ್ಟು 12 ಅಂಕಗಳನ್ನು ಗಳಿಸಿರುವ ಪ್ರಜ್ಞಾನಂದ ಸದ್ಯ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಟೂರ್ನಿಯಲ್ಲಿ ಇನ್ನು ಕೇವಲ ಎರಡು ಸುತ್ತುಗಳು ಮಾತ್ರ ಬಾಕಿ ಉಳಿದಿದ್ದು, ಎಂಟನೇ ಬಾರಿಗೆ ನಾರ್ವೆ ಚೆಸ್ ಚಾಂಪಿಯನ್ ಪಟ್ಟಕ್ಕೇರಬೇಕೆಂಬ ಮ್ಯಾಗ್ನಸ್ ಕಾರ್ಲ್‌ಸನ್ ಅವರ ಕನಸು ಈ ಸೋಲಿನೊಂದಿಗೆ ಬಹುತೇಕ ಭಗ್ನಗೊಂಡಂತಾಗಿದೆ.