ಹೈದರಾಬಾದ್ : ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಬೌಂಡರಿ ಲೈನ್ ಸುದ್ದಿ ಸಿಕ್ಕಿದೆ. ಟೀಮ್ ಇಂಡಿಯಾದ ಐತಿಹಾಸಿಕ ನ್ಯೂಜಿಲೆಂಡ್ ಪ್ರವಾಸದ ಅಧಿಕೃತ ವೇಳಾಪಟ್ಟಿಯನ್ನು ಕ್ರಿಕೆಟ್ ನ್ಯೂಜಿಲ್ಯಾಂಡ್ ಬುಧವಾರದಂದು ಪ್ರಕಟಿಸಿದೆ. ನ್ಯೂಜಿಲೆಂಡ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ತವರು ಸರಣಿ ಇದಾಗಿದ್ದು, ಭಾರತದ ಜೊತೆಗೆ ಶ್ರೀಲಂಕಾ ಪುರುಷರ ತಂಡ ಮತ್ತು ಬಾಂಗ್ಲಾದೇಶದ ಮಹಿಳೆಯರ ತಂಡಗಳ ಪ್ರವಾಸಗಳೂ ಇದರಲ್ಲಿ ಸೇರಿವೆ. ಈ ಪ್ರವಾಸದಲ್ಲಿ ಭಾರತ ತಂಡವು ಮೂರೂ ಸ್ವರೂಪಗಳಲ್ಲಿ ಒಟ್ಟು 12 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಎರಡು ಟೆಸ್ಟ್‌ಗಳು, ಐದು ಏಕದಿನ (ODI) ಪಂದ್ಯಗಳು ಮತ್ತು ಐದು ಟಿ20ಐ (T20I) ಪಂದ್ಯಗಳು ಒಳಗೊಂಡಿದ್ದು, ಸರಣಿಯು ಅಕ್ಟೋಬರ್‌ನಿಂದ ಆರಂಭಗೊಂಡು ಡಿಸೆಂಬರ್ ಆರಂಭದವರೆಗೆ ಜರುಗಲಿದೆ.
ಈ ಹೈ-ವೋಲ್ಟೇಜ್ ಪ್ರವಾಸವು ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದೊಂದಿಗೆ ಅಧಿಕೃತವಾಗಿ ಆರಂಭವಾಗಲಿದೆ. ತದನಂತರ ಅಕ್ಟೋಬರ್ 24, 27, 30 ಮತ್ತು ನವೆಂಬರ್ 1 ರಂದು ಉಳಿದ ಟಿ20 ಪಂದ್ಯಗಳು ಕ್ರಮವಾಗಿ ಜರುಗಲಿವೆ. ಟಿ20 ಸರಣಿ ಮುಗಿಯುತ್ತಿದ್ದಂತೆ ನವೆಂಬರ್ 4 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ನವೆಂಬರ್ 7, 10, 13 ಮತ್ತು 15 ರವರೆಗೆ ಒಟ್ಟು 5 ಪಂದ್ಯಗಳು ನಡೆಯಲಿವೆ. ಅಂತಿಮವಾಗಿ ಅಭಿಮಾನಿಗಳು ಕಾತುರದಿಂದ ಕಾಯುವ ಸಾಂಪ್ರದಾಯಿಕ ಟೆಸ್ಟ್ ಪಂದ್ಯಗಳು ನವೆಂಬರ್ 19 ರಿಂದ ಆರಂಭವಾಗಲಿವೆ. ಮೊದಲ ಟೆಸ್ಟ್ ನವೆಂಬರ್ 19-23 ರವರೆಗೆ ಹಾಗೂ ಎರಡನೇ ಟೆಸ್ಟ್ ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿದೆ. ಭಾರತೀಯ ತಂಡದ ಜತೆ ಇಂತಹ ಬೃಹತ್ ಪ್ರವಾಸವನ್ನು ಆಯೋಜಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಅತ್ಯಂತ ಉತ್ಸುಕವಾಗಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರಿತ್ ಬುಮ್ರಾ ಅವರಂತಹ ವಿಶ್ವದ ಶ್ರೇಷ್ಠ ಆಟಗಾರರನ್ನು ತಮ್ಮ ನೆಲದಲ್ಲಿ ನೋಡಲು ಅಲ್ಲಿನ ಅಭಿಮಾನಿಗಳು ಕೂಡ ಸಜ್ಜಾಗಿದ್ದಾರೆ.
"ಕ್ರಿಕೆಟ್ ವಿಷಯಕ್ಕೆ ಬಂದರೆ, ಅದು ಭಾರತಕ್ಕಿಂತ ದೊಡ್ಡದಾಗುವುದಿಲ್ಲ. ನ್ಯೂಜಿಲೆಂಡ್‌ನವರಿಗೆ ಬೇರೆ ಯಾವುದೇ ಪ್ರವಾಸವನ್ನು ನೀಡದಂತಹ ಅತ್ಯುತ್ತಮ ಅನುಭವವನ್ನು ನೀಡಲು ನಾವು ದೃಢನಿಶ್ಚಯ ಹೊಂದಿದ್ದೇವೆ. ಇದೊಂದು ಕೇವಲ ಕ್ರಿಕೆಟ್ ಸರಣಿಯಲ್ಲ, ಬದಲಿಗೆ ಎರಡೂ ದೇಶಗಳ ನಡುವಿನ ಸ್ನೇಹಪರ ಬೆಳವಣಿಗೆಯಾಗಿದೆ" ಎಂದು ನ್ಯೂಜಿಲೆಂಡ್‌ನ ಮುಖ್ಯ ಮಾರ್ಕೆಟಿಂಗ್ ಮತ್ತು ವಾಣಿಜ್ಯ ಅಧಿಕಾರಿ ಗ್ಲೆನ್ ಕ್ರಿಚ್ಲೆ ಹೆಮ್ಮೆಯಿಂದ ಹೇಳಿದ್ದಾರೆ. ಟಿ20 ಸರಣಿಯ ಮೊದಲ ಪಂದ್ಯ ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ, ಎರಡನೇ ಪಂದ್ಯ ಅಕ್ಟೋಬರ್ 24 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ, ಮೂರನೇ ಪಂದ್ಯ ಅಕ್ಟೋಬರ್ 27 ರಂದು ವೆಲ್ಲಿಂಗ್ಟನ್‌ನಲ್ಲಿ, ನಾಲ್ಕನೇ ಪಂದ್ಯ ಅಕ್ಟೋಬರ್ 30 ರಂದು ಆಕ್ಲೆಂಡ್‌ನಲ್ಲಿ ಮತ್ತು ಐದನೇ ಪಂದ್ಯ ನವೆಂಬರ್ 1 ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.
ಏಕದಿನ ಸರಣಿಯ ಮೊದಲ ಪಂದ್ಯ ನವೆಂಬರ್ 4 ರಂದು ಆಕ್ಲೆಂಡ್‌ನಲ್ಲಿ, ಎರಡನೇ ಪಂದ್ಯ ನವೆಂಬರ್ 7 ರಂದು ವೆಲ್ಲಿಂಗ್ಟನ್‌ನಲ್ಲಿ, ಮೂರನೇ ಪಂದ್ಯ ನವೆಂಬರ್ 10 ರಂದು ಹ್ಯಾಮಿಲ್ಟನ್‌ನಲ್ಲಿ, ನಾಲ್ಕನೇ ಪಂದ್ಯ ನವೆಂಬರ್ 13 ರಂದು ಮೌಂಟ್ ಮೌಂಗನುಯಿಯಲ್ಲಿ ಹಾಗೂ ಐದನೇ ಪಂದ್ಯ ನವೆಂಬರ್ 15 ರಂದು ಮೌಂಟ್ ಮೌಂಗನುಯಿಯಲ್ಲಿ ಜರುಗಲಿದೆ. ಕೊನೆಯದಾಗಿ ನಡೆಯುವ ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 19-23 ರವರೆಗೆ ವೆಲ್ಲಿಂಗ್ಟನ್‌ನಲ್ಲಿ ಮತ್ತು ಎರಡನೇ ಟೆಸ್ಟ್ ಪಂದ್ಯ ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ಆಯೋಜನೆಗೊಂಡಿದೆ. ಭರಪೂರ ಮನರಂಜನೆ ನೀಡಲಿರುವ ಈ ಸರಣಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ಸಿದ್ಧವಾಗುತ್ತಿದೆ.