ಕೇಪ್‌ಟೌನ್ : ಮುಂಬರುವ 2026ರ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕಿರುವ ದಕ್ಷಿಣ ಆಫ್ರಿಕಾ ತಂಡದ ಕೆಲ ಆಟಗಾರರಿಗೆ ಇನ್ನು ಕೂಡ ವೀಸಾ ಸಿಗದ ಕಾರಣ, ತಂಡದ ಹೊರಡುವಿಕೆ ವಿಳಂಬವಾಗಿದೆ. ಮೆಕ್ಸಿಕನ್ ನಗರವಾದ ಪಚುಕಾದಲ್ಲಿರುವ ತನ್ನ ತರಬೇತಿ ಶಿಬಿರಕ್ಕೆ ದಕ್ಷಿಣ ಆಫ್ರಿಕಾ ಫುಟ್‌ಬಾಲ್ ತಂಡವು ಚಾರ್ಟರ್ಡ್ ವಿಮಾನದ ಮೂಲಕ ಪ್ರಯಾಣಿಸಬೇಕಾಗಿತ್ತು. ಆದರೆ, ವೀಸಾ ಸಮಸ್ಯೆಯಿಂದಾಗಿ ಈ ಪ್ರಯಾಣವು ಸದ್ಯಕ್ಕೆ 'ಅನಿರ್ದಿಷ್ಟಾವಧಿ'ಯಾಗಿ ಮುಂದೂಡಲ್ಪಟ್ಟಿದೆ ಎಂದು ದಕ್ಷಿಣ ಆಫ್ರಿಕಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ಈ ಗಂಭೀರ ವಿಷಯದ ಬಗ್ಗೆ ದಕ್ಷಿಣ ಆಫ್ರಿಕಾದ ಫುಟ್‌ಬಾಲ್ ಅಸೋಸಿಯೇಷನ್ (ಎಸ್‌ಎಎಫ್‌ಎ) ಅಧಿಕಾರಿಗಳು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಈ ಬೇಜವಾಬ್ದಾರಿತನದ ವಿರುದ್ಧ ಅಲ್ಲಿನ ಕ್ರೀಡಾ ಸಚಿವ ಗೇಟನ್ ಮೆಕಂರಿ ಅವರು ತಮ್ಮ ಸಾಮಾಜಿಕ ಜಾಲತಾಣವಾದ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣ ಹಾಗೂ ವೀಸಾ ನಿರ್ವಹಣೆಯಲ್ಲಿ ದಕ್ಷಿಣ ಆಫ್ರಿಕಾ ಫುಟ್‌ಬಾಲ್ ಅಸೋಸಿಯೇಷನ್ ತೋರಿರುವ ಈ ವೈಫಲ್ಯವು ಕ್ರೀಡಾಪಟುಗಳಿಗೆ ಮತ್ತು ತರಬೇತಿ ಸಿಬ್ಬಂದಿಗೆ ಮಾಡಿದ ದೊಡ್ಡ ಅನ್ಯಾಯ ಹಾಗೂ ಇದೊಂದು ತೀವ್ರ ಮುಜುಗರದ ಸಂಗತಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಈ ಇಡೀ ಗೊಂದಲದ ಬಗ್ಗೆ ತಮಗೆ ತಕ್ಷಣವೇ ಪೂರ್ಣ ಮಾಹಿತಿ ಬೇಕು ಮತ್ತು ಇಂತಹ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಸೋಸಿಯೇಷನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. "ಅವರು ನಮ್ಮನ್ನು ಮೂರ್ಖರೆಂದು ಭಾವಿಸಿದ್ದಾರೆ" ಎಂದು ಸಚಿವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ನಿಗದಿತ ವೇಳಾಪಟ್ಟಿಯ ಪ್ರಕಾರ, ಜೂನ್ 11ರಂದು ಮೆಕ್ಸಿಕೋ ನಗರದಲ್ಲಿ ಆತಿಥೇಯ ದೇಶವಾದ ಮೆಕ್ಸಿಕೋ ವಿರುದ್ಧ ದಕ್ಷಿಣ ಆಫ್ರಿಕಾ ತನ್ನ ಆರಂಭಿಕ ವಿಶ್ವಕಪ್ ಪಂದ್ಯವನ್ನು ಆಡಬೇಕಾಗಿದೆ. 2010ರಲ್ಲಿ ಸ್ವತಃ ವಿಶ್ವಕಪ್ ಆಯೋಜಿಸಿದ ನಂತರ ದಕ್ಷಿಣ ಆಫ್ರಿಕಾ ತಂಡವು ಇದೇ ಮೊದಲ ಬಾರಿಗೆ ಇಂತಹ ಬೃಹತ್ ಜಾಗತಿಕ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ತಂಡವು, ಜೂನ್ 18ರಂದು ಅಟ್ಲಾಂಟಾದಲ್ಲಿ ಚೆಕ್ ಗಣರಾಜ್ಯ ತಂಡವನ್ನು ಹಾಗೂ ಜೂನ್ 24ರಂದು ಮಾಂಟೆರ್ರಿಯಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ ಪ್ರಸ್ತುತ ಎದುರಾಗಿರುವ ವೀಸಾ ಸಮಸ್ಯೆಯು ಕ್ರೀಡಾಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.