ಬೆಂಗಳೂರು : ಹತ್ತೊಂಬತ್ತನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐದು ವಿಕೆಟ್‌ಗಳ ಅಂತರದಿಂದ ಮಣಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ, ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನದ ಮೂಲಕ ಗುಜರಾತ್ ಟೈಟಾನ್ಸ್ ತಂಡವನ್ನು 20 ಓವರ್‌ಗಳಲ್ಲಿ ಕೇವಲ 155 ರನ್‌ಗಳಿಗೆ ಕಟ್ಟಿಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡವು ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿಕ ಪ್ರದರ್ಶನಗಳ ಕಡೆ ಗಮನಹರಿಸಿದರೆ, ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರದ್ದೇ ಪಾರುಪತ್ಯ ಕಂಡುಬಂದಿದೆ. ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅವರು ಬರೋಬ್ಬರಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 237.31 ರ ಅತ್ಯಾಕರ್ಷಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 'ಸೂಪರ್ ಸ್ಟ್ರೈಕರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಯೊಂದಿಗೆ ಅತ್ಯಾಧುನಿಕ ಟಾಟಾ ಸಿಯಾರ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿವಿಧ ಪ್ರಶಸ್ತಿಗಳ ಮೂಲಕ ಒಟ್ಟಾರೆ 45 ಲಕ್ಷ ರೂಪಾಯಿ ನಗದು ಬಹುಮಾನ ಇವರ ಪಾಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್ಸ್-ಅಪ್ ತಂಡಗಳಿಗೆ ಬೃಹತ್ ಮೊತ್ತದ ನಗದು ಬಹುಮಾನವನ್ನು ವಿತರಿಸಲಾಯಿತು. ಚಾಂಪಿಯನ್ ಆರ್‌ಸಿಬಿ ತಂಡಕ್ಕೆ 20 ಕೋಟಿ ರೂಪಾಯಿ ಸಿಕ್ಕರೆ, ರನ್ನರ್ಸ್-ಅಪ್ ಗುಜರಾತ್ ಟೈಟಾನ್ಸ್ ತಂಡ 12.5 ಕೋಟಿ ರೂಪಾಯಿ ಬಹುಮಾನ ಪಡೆಯಿತು. ಇನ್ನು ಕ್ವಾಲಿಫೈಯರ್-2 ರಲ್ಲಿ ಸೋತ ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ಕೋಟಿ ರೂಪಾಯಿ ಹಾಗೂ ಎಲಿಮಿನೇಟರ್‌ನಲ್ಲಿ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 6.5 ಕೋಟಿ ರೂಪಾಯಿ ನಗದು ಬಹುಮಾನ ಲಭಿಸಿದೆ.
ಟೂರ್ನಿಯ ಇತರ ಪ್ರಮುಖ ಪ್ರಶಸ್ತಿಗಳ ವಿವರಗಳನ್ನು ನೋಡುವುದಾದರೆ, ಗುಜರಾತ್ ಟೈಟಾನ್ಸ್ ತಂಡದ ಕಗಿಸೋ ರಬಾಡ 29 ವಿಕೆಟ್ ಕಬಳಿಸಿ 'ಪರ್ಪಲ್ ಕ್ಯಾಪ್' (10 ಲಕ್ಷ ರೂ.) ಪಡೆದರೆ, ಅದೇ ತಂಡದ ಮೊಹಮ್ಮದ್ ಸಿರಾಜ್ 172 ಡಾಟ್ ಬಾಲ್ ಎಸೆಯುವ ಮೂಲಕ 'ಮೋಸ್ಟ್ ಡಾಟ್ ಬಾಲ್ಸ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ 'ಅತ್ಯಂತ ಮೌಲ್ಯಯುತ ಕ್ರಿಕೆಟಿಗ' (15 ಲಕ್ಷ ರೂ.), 'ಎಮರ್ಜಿಂಗ್ ಪ್ಲೇಯರ್' (10 ಲಕ್ಷ ರೂ.) ಹಾಗೂ 71 ಸಿಕ್ಸರ್ ಸಿಡಿಸಿ 'ಸೂಪರ್ ಸಿಕ್ಸ್ ಆಫ್ ದಿ ಸೀಸನ್' ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಗುಜರಾತ್ ತಂಡದ ಸಾಯಿ ಸುದರ್ಶನ್ 'ಫ್ಯಾಂಟಸಿ ಕಿಂಗ್' ಮತ್ತು 75 ಬೌಂಡರಿಗಳೊಂದಿಗೆ 'ಸೂಪರ್ ಫೋರ್ಸ್ ಆಫ್ ದಿ ಸೀಸನ್' ಪ್ರಶಸ್ತಿಗಳನ್ನು ಪಡೆದು ತಲಾ 10 ಲಕ್ಷ ರೂಪಾಯಿ ಗೆದ್ದಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಮನೀಶ್ ಪಾಂಡೆ ಅವರಿಗೆ 'ಕ್ಯಾಚ್ ಆಫ್ ದಿ ಸೀಸನ್' ಹಾಗೂ ಪಂಜಾಬ್ ಕಿಂಗ್ಸ್ ತಂಡಕ್ಕೆ 'ಫೇರ್ ಪ್ಲೇ ಅವಾರ್ಡ್' ಒಲಿದಿದೆ. ಉತ್ತಮ ಪಿಚ್ ಮತ್ತು ಮೈದಾನ ನಿರ್ವಹಣೆಗಾಗಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್‌ಗೆ 50 ಲಕ್ಷ ರೂಪಾಯಿ ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ಗೆ 25 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.