ಹೊಸದಿಲ್ಲಿ: ಮುಂಬರುವ ಏಷ್ಯನ್ ಕ್ರೀಡಾಕೂಟದ ಸೆಲೆಕ್ಷನ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ವಿನೇಶ್ ಫೋಗಟ್ ಅವರಿಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದ ದಿಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ (WFI) ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಹೈಕೋರ್ಟ್ ನಿರ್ದೇಶನಕ್ಕೆ ತಡೆಯಾಜ್ಞೆ ನೀಡಲು ಸ್ಪಷ್ಟವಾಗಿ ನಿರಾಕರಿಸಿತು.
ವಿಚಾರಣೆಯ ವೇಳೆ ವಿನೇಶ್ ಫೋಗಟ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಮಾಧವಿ ದಿವಾನ್ ಅವರಿಗೆ ನ್ಯಾಯಮೂರ್ತಿ ನರಸಿಂಹ ಅವರು, "ನಾವು ತಡೆಯುವುದಿಲ್ಲ, ನೀವು ಹೋಗಿ ಭಾಗವಹಿಸಿ" ಎಂದು ತಿಳಿಸಿದರು. ಇದೇ ವೇಳೆ ಡಬ್ಲ್ಯುಎಫ್‌ಐ ಸಲ್ಲಿಸಿದ ಮನವಿಯ ಮೇರೆಗೆ ಪೀಠವು ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ಹಂತದಲ್ಲಿ ಎತ್ತಲಾಗುವ ದೊಡ್ಡ ಸಮಸ್ಯೆಗಳ ಬಗ್ಗೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿತು. ಇದಕ್ಕೂ ಮುನ್ನ ಮೇ 22ರಂದು ದಿಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಮುಂಬರುವ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿತ್ತು.