image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳ್ಳಿ ಪದಕ ಗೆದ್ದು ಸ್ವಂತ ರಾಷ್ಟ್ರೀಯ ದಾಖಲೆ ಮುರಿದ ಭಾರತದ ಗುಲ್ವೀರ್ ಸಿಂಗ್

ಬೆಳ್ಳಿ ಪದಕ ಗೆದ್ದು ಸ್ವಂತ ರಾಷ್ಟ್ರೀಯ ದಾಖಲೆ ಮುರಿದ ಭಾರತದ ಗುಲ್ವೀರ್ ಸಿಂಗ್

ಹೊಸದಿಲ್ಲಿ: ಪುರುಷರ 5,000 ಮೀಟರ್ ಹಾಗೂ 10,000 ಮೀಟರ್ ಓಟದಲ್ಲಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತದ ಖ್ಯಾತ ದೂರ ಅಂತ ರದ ಓಟಗಾರ ಗುಲ್ವೀರ್ ಸಿಂಗ್ ಅವರು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಸೌಂಡ್ ರನ್ನಿಂಗ್ ಟ್ರ್ಯಾಕ್ ಫೆಸ್ಟ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪುರುಷರ 5,000 ಮೀಟರ್ ಓಟದ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೈಲಿಗಲ್ಲು ತಲುಪುವ ಹಾದಿಯಲ್ಲಿ ಗುಲ್ವೀರ್ ಸಿಂಗ್ ಅವರು ಎರಡು ವರ್ಷಗಳ ಹಿಂದೆ ಜಪಾನ್‌ನಲ್ಲಿ ನಿರ್ಮಿಸಿದ್ದ ತಮ್ಮದೇ ಆದ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದಿದ್ದಾರೆ. ಸದ್ಯ ಅಮೆರಿಕದಲ್ಲಿರುವ ಗುಲ್ವೀರ್ ಅವರು ಟ್ರ್ಯಾಕ್‌ನಲ್ಲಿ 3,000 ಮೀಟರ್ ಓಟದಿಂದ ಹಿಡಿದು 25 ಮೀಟರ್ ರೋಡ್ ರೇಸ್ ತನಕದ ಎಲ್ಲಾ ಸ್ಪರ್ಧೆಗಳಲ್ಲಿ ಹಲವು ರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವ ಭಾರತದ ಮೊದಲ ದೂರ ಅಂತರದ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ ಬೆಳ್ಳಿ ಗೆದ್ದಿರುವ ಗುಲ್ವೀರ್ ಸಿಂಗ್ ಅವರಿಗೆ ಈ ಋತುವಿನಲ್ಲಿ ಇದು ನಾಲ್ಕನೇ ಯಶಸ್ವಿ ಸ್ಪರ್ಧೆಯಾಗಿದೆ. ಕಳೆದ ವರ್ಷ ಗುಲ್ವೀರ್ ಅವರು ಪುರುಷರ 5,000 ಮೀಟರ್ ಓಟದಲ್ಲಿ 13 ನಿಮಿಷಗಳ ಗಡಿಯನ್ನು ಮೀರಿದ ಭಾರತದ ಮೊದಲ ಓಟಗಾರ ಎನಿಸಿಕೊಂಡಿದ್ದರು. ಬೋಸ್ಟನ್‌ನಲ್ಲಿ ನಡೆದ ಡಿಎಂಆರ್ ಚಾಲೆಂಜ್‌ನ ಇಂದೋರ್ ರೇಸ್‌ನಲ್ಲಿ 12:29.77 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಗುಲ್ವೀರ್ ಈ ಅಪರೂಪದ ಸಾಧನೆ ಮಾಡಿದ್ದರು. ಇದು ಸದ್ಯಕ್ಕೆ ಗುಲ್ವೀರ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿ ಉಳಿದುಕೊಂಡಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಅಮೆರಿಕದಲ್ಲೇ ನಡೆದಿದ್ದ ಸೌಂಡ್ ರನ್ನಿಂಗ್ ಇನ್ವಿಟೇಶನಲ್‌ನ 5,000 ಮೀಟರ್ ಶಾರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲೂ ಅವರು ಮೂರನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ಇದೀಗ ಲಾಸ್ ಏಂಜಲೀಸ್ ಟ್ರ್ಯಾಕ್ ಫೆಸ್ಟ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಮತ್ತೊಮ್ಮೆ ಭಾರತದ ಧ್ವಜವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.

Category
ಕರಾವಳಿ ತರಂಗಿಣಿ