image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫ್ರೆಂಚ್ ಓಪನ್ ಕದನಕ್ಕೆ ಕೌಂಟ್‌ಡೌನ್: ಸ್ಟಾರ್ ಆಟಗಾರರ ಮೊದಲ ಸುತ್ತಿನ ಮುಖಾಮುಖಿ ವಿವರ ಪ್ರಕಟ

ಫ್ರೆಂಚ್ ಓಪನ್ ಕದನಕ್ಕೆ ಕೌಂಟ್‌ಡೌನ್: ಸ್ಟಾರ್ ಆಟಗಾರರ ಮೊದಲ ಸುತ್ತಿನ ಮುಖಾಮುಖಿ ವಿವರ ಪ್ರಕಟ

ಪ್ಯಾರಿಸ್ : ಪ್ಯಾರಿಸ್‌ನಲ್ಲಿ ನಡೆದ ಡ್ರಾ ಸಮಾರಂಭದ ಪ್ರಕಾರ, ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯ ರೋಚಕ ಮುಖಾಮುಖಿಗಳು ನಿರ್ಧಾರವಾಗಿವೆ. ಇಟಲಿಯ ತಾರೆ, ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಜನ್ನಿಕ್ ಸಿನ್ನರ್ ತಮ್ಮ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಗುರಿಯೊಂದಿಗೆ ಈ ವರ್ಷದ ಅಭಿಯಾನವನ್ನು ಆರಂಭಿಸಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಕ್ಲೆಮೆಂಟ್ ಟಬೂರ್ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ ಅಗ್ರ ಶ್ರೇಯಾಂಕದ ಸಿನ್ನರ್ ಅವರು ಸೆಮಿಫೈನಲ್ ತಲುಪಿದರೆ, ಅಲ್ಲಿ ನಾಲ್ಕನೇ ಶ್ರೇಯಾಂಕದ ಕೆನಡಾದ ಆಟಗಾರ ಫೆಲಿಕ್ಸ್ ಅಗುರ್ ಅಲಿಯಸಿಮ್ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಇನ್ನೊಂದೆಡೆ, ಎರಡು ಬಾರಿಯ ಹಾಲಿ ಚಾಂಪಿಯನ್ ಮತ್ತು ವಿಶ್ವದ ನಂ.2 ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಮಣಿಕಟ್ಟಿನ ಗಾಯದ ಸಮಸ್ಯೆಯಿಂದಾಗಿ ಕೊನೆಯ ಕ್ಷಣದಲ್ಲಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಸ್ಪೇನ್ ಆಟಗಾರ ಅಲ್ಕರಾಜ್ ಅವರ ಅಲಭ್ಯತೆಯ ಹಿನ್ನೆಲೆಯಲ್ಲಿ, ಜರ್ಮನಿಯ ವಿಶ್ವದ ನಂ.3ನೇ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವರಿಗೆ ಎರಡನೇ ಶ್ರೇಯಾಂಕ ಲಭಿಸಿದೆ. ಜ್ವೆರೆವ್ ಅವರು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬೆಂಜಮಿನ್ ಬೋನ್ಝಿ ಅವರ ಸವಾಲನ್ನು ಎದುರಿಸಲಿದ್ದಾರೆ.

ತಮ್ಮ ವೃತ್ತಿಜೀವನದ 25ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ದಿಗ್ಗಜ ಆಟಗಾರ ನೋವಾಕ್ ಜೊಕೊವಿಕ್ ಅವರು ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಯುವ ಆಟಗಾರ ಜಿಯೋವನ್ ಪೆರಿಕಾರ್ಡ್ ಅವರನ್ನು ಎದುರಿಸಲಿದ್ದಾರೆ. ಟೂರ್ನಿಯ ಡ್ರಾ ಮುಖಾಮುಖಿಯ ಲೆಕ್ಕಾಚಾರದ ಪ್ರಕಾರ, ನೋವಾಕ್ ಜೊಕೊವಿಕ್ ಹಾಗೂ ಅಲೆಕ್ಸಾಂಡರ್ ಜ್ವೆರೆವ್ ಅವರು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಬಲವಾದ ಸಾಧ್ಯತೆಯಿದೆ.

ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಕೋಕೋ ಗಫ್ ಅವರು ತಮ್ಮದೇ ದೇಶದವರಾದ ಟೇಲರ್ ಟೌನ್‌ಸೆಂಡ್ ಅವರನ್ನು ಎದುರಿಸುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ವಿಶ್ವದ ನಂ.1 ಆಟಗಾರ್ತಿ ಹಾಗೂ ಕಳೆದ ವರ್ಷದ ರನ್ನರ್-ಅಪ್ ಆರ್ಯನಾ ಸಬಲೆಂಕಾ ಅವರು ಮೊದಲ ಸುತ್ತಿನಲ್ಲಿ ಸ್ಪೇನ್‌ನ ಜೆಸ್ಸಿಕಾ ಬೌಝಾಸ್ ಮನೆರೋ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇದೇ ವರ್ಷದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿ ಭರ್ಜರಿ ಫಾರ್ಮ್‌ನಲ್ಲಿರುವ, ಕಠಿಣ ಸವಾಲುಗಾರ ಹಾಗೂ ವಿಶ್ವದ ನಂ.2 ಆಟಗಾರ್ತಿ ಎಲೆನಾ ರೈಬಾಕಿನಾ ಅವರು ಮೊದಲ ಸುತ್ತಿನಲ್ಲಿ ಸ್ಲೊವೇನಿಯಾದ ವೆರೋನಿಕಾ ಅವರನ್ನು ಮುಖಾಮುಖಿಯಾಗಲಿದ್ದಾರೆ. ಇವರೊಂದಿಗೆ ಮೂರನೇ ಶ್ರೇಯಾಂಕದ ಪ್ರಮುಖ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ್ತಿ ಎಮರ್ಸನ್ ಜೋನ್ಸ್ ಅವರ ಸವಾಲನ್ನು ಎದುರಿಸಲಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಕ್ಲೇ ಕೋರ್ಟ್ ಜಿದ್ದಾಜಿದ್ದಿನ ಕದನಕ್ಕೆ ಪ್ಯಾರಿಸ್ ಸಂಪೂರ್ಣವಾಗಿ ಸಜ್ಜಾಗಿದೆ.

Category
ಕರಾವಳಿ ತರಂಗಿಣಿ