image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಥೈಲ್ಯಾಂಡ್ ಓಪನ್: ರೋಚಕ ಜಯದೊಂದಿಗೆ 2026ರ ಋತುವಿನ ಮೊದಲ ಫೈನಲ್‌ಗೆ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ

ಥೈಲ್ಯಾಂಡ್ ಓಪನ್: ರೋಚಕ ಜಯದೊಂದಿಗೆ 2026ರ ಋತುವಿನ ಮೊದಲ ಫೈನಲ್‌ಗೆ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ

ಥೈಲ್ಯಾಂಡ್ : ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಜೋಡಿಯಾದ ಸಾತ್ವಿಕ್ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥೈಲ್ಯಾಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಭಾರತೀಯ ಜೋಡಿಯು ಮಲೇಷ್ಯಾದ ಗೋ ಸೆ ಫೀ ಮತ್ತು ನೂರ್ ಇಸುದ್ದೀನ್ ಅವರನ್ನು ಮಣಿಸಿ ಪ್ರಸಕ್ತ ಸಾಲಿನ ಋತುವಿನಲ್ಲಿ ಮೊದಲ ಬಾರಿಗೆ ಟೂರ್ನಿಯೊಂದರ ಫೈನಲ್ ತಲುಪಿದ ಸಾಧನೆ ಮಾಡಿದೆ.

​ವಿಶ್ವದ ನಾಲ್ಕನೇ ಶ್ರೇಯಾಂಕದಲ್ಲಿರುವ ಭಾರತೀಯ ಜೋಡಿಯು ಸುಮಾರು ಒಂದು ಗಂಟೆ 22 ನಿಮಿಷಗಳ ಕಾಲ ನಡೆದ ಕಠಿಣ ಪೈಪೋಟಿಯ ಮ್ಯಾಚ್‌ನಲ್ಲಿ 19-21, 22-20, 21-16 ಅಂತರದ ಸೆಟ್‌ಗಳಿಂದ ಎದುರಾಳಿಗಳನ್ನು ಮಣಿಸಿತು. ಈ ಅದ್ಭುತ ಗೆಲುವಿನೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಮಲೇಷ್ಯಾದ ಜೋಡಿಯ ವಿರುದ್ಧ ತಮ್ಮ ಹೆಡ್-ಟು-ಹೆಡ್ ದಾಖಲೆಯನ್ನು 8-2ಕ್ಕೆ ಸುಧಾರಿಸಿಕೊಂಡಿದ್ದಾರೆ. ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದರಿಂದ ಭಾರತದ ಈ ಜೋಡಿಯ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಇದರಿಂದಾಗಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಮಲೇಷಿಯನ್ನರ ವಿರುದ್ಧ ಭಾರತೀಯ ಜೋಡಿ ತೀವ್ರ ಒತ್ತಡದೊಂದಿಗೆ ಕಣಕ್ಕಿಳಿದಿತ್ತು. 2024ರಲ್ಲಿ ಥೈಲ್ಯಾಂಡ್ ಓಪನ್ ಹಾಗೂ 2025ರ ಚೀನಾ ಮಾಸ್ಟರ್ಸ್ ಗೆದ್ದ ನಂತರ ಭಾರತೀಯ ಜೋಡಿಗೆ ಈ ಋತುವಿನ ಮೊದಲ ಸೆಮಿಫೈನಲ್​ ಇದಾಗಿತ್ತು.

​ಪಂದ್ಯದ ಆರಂಭದಲ್ಲಿ ಮಲೇಷ್ಯಾ ಜೋಡಿ 3-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತಾದರೂ, ಸಾತ್ವಿಕ್ ಮತ್ತು ಚಿರಾಗ್ ತಕ್ಷಣವೇ ಪುಟಿದೆದ್ದು ಸ್ಕೋರ್ ಅನ್ನು 7-7 ಅಂತರದಲ್ಲಿ ಸಮಬಲಗೊಳಿಸಿದರು. ನಂತರ, ಮಲೇಷ್ಯಾ ಜೋಡಿಯು ಭಾರತೀಯ ಆಟಗಾರರ ನಡುವಿನ ಮಿಸ್​ ಕಮ್ಯುನಿಕೇಷನ್​ ಲಾಭವನ್ನು ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿತು. ಒಂದು ಹಂತದಲ್ಲಿ 18-12 ಅಂತರದಲ್ಲಿ ಮುನ್ನಡೆಯಲ್ಲಿದ್ದ ಮಲೇಷ್ಯಾ ವಿರುದ್ಧ ಭಾರತ ಬಲವಾಗಿ ಕಮ್​ಬ್ಯಾಕ್​ ಮಾಡಿ ಸತತ ನಾಲ್ಕು ಅಂಕಗಳನ್ನು ಕಲೆಹಾಕಿತು. ಆದಾಗ್ಯೂ ಮಲೇಷ್ಯಾ ಮೊದಲ ಸೆಟ್​ ಅನ್ನು 21-19 ಅಂತರದಲ್ಲಿ ಗೆದ್ದುಕೊಂಡಿತು.

​ಎರಡನೇ ಸೆಟ್​ನ ಆಟವೂ ಅತ್ಯಂತ ನಾಟಕೀಯ ಮತ್ತು ರೋಚಕತೆಯಿಂದ ಕೂಡಿತ್ತು. ಮೊದಲ ಸೆಟ್​ನಲ್ಲಿ ತಾವು ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡ ಭಾರತೀಯ ಜೋಡಿ ವಿರಾಮದ ವೇಳೆಗೆ 11-9 ಅಂತರದ ಮುನ್ನಡೆ ಸಾಧಿಸಿತು. ಆದರೆ ಮಲೇಷ್ಯಾ ಜೋಡಿ ತೀವ್ರ ಹೋರಾಟ ನಡೆಸಿ 20-20ರಲ್ಲಿ ಪಂದ್ಯವನ್ನು ಸಮಬಲಗೊಳಿಸಿತು. ಆನಂತರ ಉಭಯ ತಂಡಗಳ ನಡುವಿನ ಪೈಪೋಟಿ ತೀವ್ರಗೊಂಡಾಗ ಸಾತ್ವಿಕ್ ತೀಕ್ಷ್ಣವಾದ ಹೊಡೆತಗಳ ಮೂಲಕ ನೆರವಾದರು. ಪರಿಣಾಮ ಭಾರತವು ಎರಡನೇ ಸೆಟ್​ ಅನ್ನು 22-20 ಅಂತರದಿಂದ ತನ್ನದಾಗಿಸಿಕೊಂಡಿತು.

​ಎರಡನೇ ಸೆಟ್​ ಗೆದ್ದ ವಿಶ್ವಾಸದೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಮೂರನೇ ಸೆಟ್​ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಭಾರತೀಯ ಜೋಡಿ ತಮ್ಮ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೆ 21-16 ಅಂತರದಲ್ಲಿ ಸೆಟ್​ ಮತ್ತು ಪಂದ್ಯವನ್ನು ಗೆದ್ದು ಫೈನಲ್‌ಗೆ ಮುನ್ನಡೆಯಿತು. ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್‌ನಲ್ಲಿ ಭಾರತದ ಈ ಜೋಡಿಯು 21ನೇ ಶ್ರೇಯಾಂಕಿತ ಇಂಡೋನೇಷ್ಯಾದ ಲಿಯೋ ರೋಲಿ ಕರ್ನಾಂಡೋ ಮತ್ತು ಡೇನಿಯಲ್ ಮಾರ್ಟಿನ್ ಸವಾಲನ್ನು ಎದುರಿಸಲಿದೆ.

Category
ಕರಾವಳಿ ತರಂಗಿಣಿ