ಟೊರಾಂಟೊ: ಮುಂಬರುವ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಯಶಸ್ವಿ ಮತ್ತು ಸುರಕ್ಷಿತ ಆಯೋಜನೆಗಾಗಿ ಕೆನಡಾ ಸರ್ಕಾರವು ಭದ್ರತಾ ವೆಚ್ಚವಾಗಿ 145 ಮಿಲಿಯನ್ ಡಾಲರ್ (ಸುಮಾರು 1,375 ಕೋಟಿ ರೂಪಾಯಿ) ಹಣವನ್ನು ಮೀಸಲಿಟ್ಟಿದೆ. ಈ ಕುರಿತು ದೇಶದ ಸಾರ್ವಜನಿಕ ಸುರಕ್ಷತೆ ಸಚಿವ ಗಾರಿ ಆನಂದಸಂಗರಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಜಂಟಿ ಆತಿಥ್ಯದಲ್ಲಿ ಈ ಬೃಹತ್ ಕ್ರೀಡಾಕೂಟ ನಡೆಯಲಿದ್ದು, ಕೆನಡಾದ ಟೊರಾಂಟೊ ಮತ್ತು ವ್ಯಾಂಕೋವರ್ ನಗರಗಳಲ್ಲಿ ಒಟ್ಟು 13 ಪಂದ್ಯಗಳು ಜರುಗಲಿವೆ. ಈ ಅವಧಿಯಲ್ಲಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಭದ್ರತಾ ನಿಧಿಯಲ್ಲಿ ವ್ಯಾಂಕೋವರ್ ನಗರಕ್ಕೆ ಸಿಂಹಪಾಲು ದೊರೆತಿದ್ದು, 100 ಮಿಲಿಯನ್ ಡಾಲರ್ (ಸುಮಾರು 950 ಕೋಟಿ ರೂಪಾಯಿ) ಅನುದಾನ ನೀಡಲಾಗಿದೆ. ಇನ್ನುಳಿದ 45 ಮಿಲಿಯನ್ ಡಾಲರ್ (ಸುಮಾರು 427 ಕೋಟಿ ರೂಪಾಯಿ) ಹಣವನ್ನು ಟೊರಾಂಟೊ ನಗರದ ಭದ್ರತಾ ವ್ಯವಸ್ಥೆಗೆ ಬಳಸಲಾಗುವುದು. ಈ ಹಣವನ್ನು ಸ್ಥಳೀಯ ರಾಜ್ಯಗಳು ಮತ್ತು ಮುನಿಸಿಪಾಲಿಟಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಟೊರಾಂಟೊದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ವಿವರಿಸಿದ್ದಾರೆ. ವಿಶೇಷವೆಂದರೆ, ಆತಿಥೇಯ ನಗರಗಳಿಗೆ ಕೆನಡಾ ಸರ್ಕಾರ ಈಗಾಗಲೇ 220 ಮಿಲಿಯನ್ ಡಾಲರ್ (ಸುಮಾರು 2,087 ಕೋಟಿ ರೂಪಾಯಿ) ಹಣವನ್ನು ನೀಡಿದ್ದು, ಈಗ ಘೋಷಿಸಿರುವ ಭದ್ರತಾ ಮೊತ್ತವು ಇದಕ್ಕೆ ಹೆಚ್ಚುವರಿಯಾಗಿರಲಿದೆ. ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬಕ್ಕೆ ಕೆನಡಾ ಸಂಪೂರ್ಣವಾಗಿ ಸಜ್ಜಾಗುತ್ತಿದೆ ಎಂಬುದಕ್ಕೆ ಈ ಬೃಹತ್ ಆರ್ಥಿಕ ಪ್ಯಾಕೇಜ್ ಸಾಕ್ಷಿಯಾಗಿದೆ.