ಬೆಂಗಳೂರು : 18ನೇ ಆವೃತ್ತಿಯ ಟಿಸಿಎಸ್ ವರ್ಲ್ಡ್ 10K ಮ್ಯಾರಥಾನ್‌ನಲ್ಲಿ ದಾಖಲೆಗಳ ಸುರಿಮಳೆಯಾಗಿದ್ದು, ಬುರುಂಡಿಯ ರೊಡ್ರಿಗಸ್ ಕ್ವಿಜೆರಾ ಮತ್ತು ರವಾಂಡಾದ ಫ್ಲಾರೆನ್ಸ್ ನಿಯೋನ್ಕುರು ಅಂತಾರಾಷ್ಟ್ರೀಯ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಪ್ರಶಸ್ತಿ ವಂಚಿತರಾಗಿದ್ದ ಕ್ವಿಜೆರಾ ಈ ಬಾರಿ 27:31 ಸೆಕೆಂಡುಗಳಲ್ಲಿ ಗುರಿ ತಲುಪಿ, ನಾಲ್ಕು ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿಹಾಕಿ ಹೊಸ ಕೂಟ ದಾಖಲೆ ನಿರ್ಮಿಸಿದರು. ಮಹಿಳೆಯರ ವಿಭಾಗದಲ್ಲಿ ಚೊಚ್ಚಲ ಓಟದಲ್ಲೇ ಮಿಂಚಿದ ಫ್ಲಾರೆನ್ಸ್ ನಿಯೋನ್ಕುರು 30:45 ನಿಮಿಷಗಳಲ್ಲಿ ಓಟ ಮುಗಿಸಿ ಪ್ರಥಮ ಸ್ಥಾನ ಪಡೆದರು. ಭಾರತೀಯರ ವಿಭಾಗದಲ್ಲಿ ಮಹಾರಾಷ್ಟ್ರದ ಸಂಜೀವನಿ ಜಾಧವ್ ಸತತ ಮೂರನೇ ಬಾರಿ ಚಿನ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರೆ, ಪುರುಷರ ವಿಭಾಗದಲ್ಲಿ ಹರ್ಮನ್‌ಜೋತ್ ಸಿಂಗ್ 29:13 ಸೆಕೆಂಡುಗಳಲ್ಲಿ ಅಗ್ರಸ್ಥಾನ ಗಳಿಸಿದರು. ಕರ್ನಾಟಕದ ಶೈಲೇಶ್ ಕುಶ್ವಾಹ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದರು. ವಿಜೇತರಿಗೆ ಅಂಜು ಬಾಬಿ ಜಾರ್ಜ್, ಬ್ಲಾಂಕಾ ವ್ಲಾಸಿಕ್ ಸೇರಿದಂತೆ ಗಣ್ಯರು ಪ್ರಶಸ್ತಿ ವಿತರಿಸಿದರು.