image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ಓಟದ ಹಬ್ಬ: 18ನೇ ಆವೃತ್ತಿಯ 'ಟಿಸಿಎಸ್ ವರ್ಲ್ಡ್ 10K'ಗೆ ದಾಖಲೆ ಸಂಖ್ಯೆಯ ಸ್ಪರ್ಧಿಗಳ ಸಜ್ಜು!

ಬೆಂಗಳೂರಿನಲ್ಲಿ ಓಟದ ಹಬ್ಬ: 18ನೇ ಆವೃತ್ತಿಯ 'ಟಿಸಿಎಸ್ ವರ್ಲ್ಡ್ 10K'ಗೆ ದಾಖಲೆ ಸಂಖ್ಯೆಯ ಸ್ಪರ್ಧಿಗಳ ಸಜ್ಜು!

ಬೆಂಗಳೂರು: ಪ್ರತಿಷ್ಠಿತ ‘ಟಿಸಿಎಸ್ ವರ್ಲ್ಡ್ 10K ಬೆಂಗಳೂರು’ ಓಟದ ಸ್ಪರ್ಧೆಯು ತನ್ನ 18ನೇ ಆವೃತ್ತಿಗೆ ಅದ್ಧೂರಿಯಾಗಿ ಸಜ್ಜಾಗಿದ್ದು, ಈ ಬಾರಿ ದಾಖಲೆಯ 35 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಏಪ್ರಿಲ್ 26ರಂದು ನಡೆಯಲಿರುವ ಈ ಮೆಗಾ ಈವೆಂಟ್‌ಗೆ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ಓಟದಲ್ಲಿ ಹಾಲಿ ಚಾಂಪಿಯನ್‌ಗಳಾದ ಭಾರತದ ಅಭಿಷೇಕ್ ಪಾಲ್ ಮತ್ತು ಸಂಜೀವನಿ ಜಾಧವ್ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಇವರಿಗೆ ಉಗಾಂಡಾದ ಹರ್ಬರ್ಟ್ ಕಿಬೆಟ್ ಮತ್ತು ಸಾರಾ ಚೆಲಂಗಾಟ್ ಅವರಂತಹ ಅಂತಾರಾಷ್ಟ್ರೀಯ ವೇಗದ ಓಟಗಾರರು ಪ್ರಬಲ ಪೈಪೋಟಿ ನೀಡಲಿದ್ದಾರೆ. ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತೆ ಬ್ಲಾಂಕಾ ವ್ಲಾಸಿಕ್ ಅವರು ಈ ಈವೆಂಟ್‌ನ ರಾಯಭಾರಿಯಾಗಿ ಓಟಗಾರರನ್ನು ಹುರಿದುಂಬಿಸಲಿದ್ದಾರೆ.

​ವಿಶೇಷವೆಂದರೆ, ಈ ಬಾರಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕೃತ ಏರ್ಲೈನ್ ಪಾಲುದಾರರಾಗಿ ಓಟಗಾರರಿಗಾಗಿ 'ರನ್ನರ್ಸ್ ಪಾಸ್‌ಪೋರ್ಟ್' ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಸ್ಪರ್ಧಿಗಳಿಗೆ ತಮ್ಮ ಸಾಧನೆ ದಾಖಲಿಸಿಕೊಳ್ಳಲು ಮತ್ತು ವಿಮಾನ ಪ್ರಯಾಣದಲ್ಲಿ ಶೇ.20 ರಷ್ಟು ರಿಯಾಯಿತಿ ಪಡೆಯಲು ನೆರವಾಗಲಿದೆ. ಭಾರತೀಯ ಹಾಕಿ ತಾರೆ ಜರ್ಮನ್‌ಪ್ರೀತ್ ಸಿಂಗ್ ಅವರು ಇಂದು ಅಧಿಕೃತ 'ಫಿನಿಶರ್ ಟೀ-ಶರ್ಟ್' ಅನಾವರಣಗೊಳಿಸಿದ್ದು, ಟಾಪ್ 1500 ಪುರುಷ ಮತ್ತು ಮಹಿಳಾ ಓಟಗಾರರಿಗೆ ಇದು ಲಭ್ಯವಾಗಲಿದೆ.

​ಓಟಗಾರರ ಅನುಕೂಲಕ್ಕಾಗಿ ರೇಸ್ ದಿನದಂದು ಮುಂಜಾನೆ 3 ಗಂಟೆಯಿಂದಲೇ ವಿವಿಧ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಓಟದ ಮಾರ್ಗದುದ್ದಕ್ಕೂ ಡೊಳ್ಳು ಕುಣಿತ, ಹೂವಿನ ಅಲಂಕಾರ ಮತ್ತು ಚಿಯರಿಂಗ್ ವಲಯಗಳ ಮೂಲಕ ಸಾಂಸ್ಕೃತಿಕ ಕಳೆಯನ್ನು ನೀಡಲಾಗಿದೆ. ಅಲ್ಲದೆ, 'ಶೂನ್ಯ ತ್ಯಾಜ್ಯ' ಗುರಿಯೊಂದಿಗೆ ಹಸಿರು ದಳ ಇನೋವೇಶನ್ಸ್ ಸಹಯೋಗದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರೊಕ್ಯಾಮ್ ಇಂಟರ್ನ್ಯಾಷನಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಮಾತನಾಡಿ, ಈ ಓಟವು ಬೆಂಗಳೂರಿನ ಚೈತನ್ಯದ ಸಂಕೇತ ಎಂದು ಬಣ್ಣಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ಮಾನ್ಯತೆ ಪಡೆದಿರುವ ಈ ರೇಸ್ ಒಟ್ಟು 2,10,000 ಅಮೆರಿಕನ್ ಡಾಲರ್ ಬಹುಮಾನದ ಮೊತ್ತವನ್ನು ಹೊಂದಿದೆ.

Category
ಕರಾವಳಿ ತರಂಗಿಣಿ