ಲಂಡನ್: 2026ರ ಮಹಿಳಾ ಟಿ20 ವಿಶ್ವಕಪ್‌ಗಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಬೃಹತ್ ಬಹುಮಾನದ ಮೊತ್ತವನ್ನು ಘೋಷಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಜೂನ್ 12 ರಿಂದ ಆರಂಭವಾಗಲಿರುವ ಈ ಮಹತ್ವದ ಟೂರ್ನಿಯ ಒಟ್ಟು ಬಹುಮಾನದ ಮೊತ್ತವನ್ನು 8,764,615 ಡಾಲರ್‌ಗೆ (ಸುಮಾರು 82 ಕೋಟಿ ರೂಪಾಯಿ) ಏರಿಸಲಾಗಿದೆ. ಇದು 2024ರ ಆವೃತ್ತಿಗಿಂತ ಶೇಕಡಾ 10 ರಷ್ಟು ಹೆಚ್ಚಾಗಿದ್ದು, ವಿಶೇಷವೆಂದರೆ ವಿಶ್ವದ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನ ಒಟ್ಟು ಬಹುಮಾನ ಮೊತ್ತಕ್ಕಿಂತಲೂ (45 ಕೋಟಿ ರೂ.) ಇದು ಅಧಿಕವಾಗಿದೆ.
ಈ ಬಾರಿ ವಿಶ್ವಕಪ್ ಜಯಿಸುವ ತಂಡವು ಬರೋಬ್ಬರಿ 21.8 ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಳ್ಳಲಿದೆ. ರನ್ನರ್ ಅಪ್ ತಂಡಕ್ಕೆ 10 ಕೋಟಿ ರೂಪಾಯಿ ಹಾಗೂ ಸೆಮಿಫೈನಲ್ ತಲುಪುವ ತಂಡಗಳಿಗೆ ತಲಾ 6.29 ಕೋಟಿ ರೂಪಾಯಿ ಸಿಗಲಿದೆ. ಗುಂಪು ಹಂತದ ಪ್ರತಿ ಗೆಲುವಿಗೆ 29 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು, ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡವೂ ಕನಿಷ್ಠ 2.06 ಕೋಟಿ ರೂಪಾಯಿಗಳ ಬಹುಮಾನವನ್ನು ಖಚಿತವಾಗಿ ಪಡೆಯಲಿವೆ.
ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ 12 ತಂಡಗಳು ಕಣಕ್ಕಿಳಿಯುತ್ತಿದ್ದು, ಜೂನ್ 12 ರಂದು ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಮೊದಲ ಪಂದ್ಯ ನಡೆಯಲಿದೆ. ಭಾರತ ತಂಡವು ಜೂನ್ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಒಟ್ಟು 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಜುಲೈ 5 ರಂದು ಫೈನಲ್ ಪಂದ್ಯ ಜರುಗಲಿದೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಬಹುಮಾನ ಘೋಷಿಸಿರುವುದು ಕ್ರೀಡೆಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ.