image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಯುಷ್ ಶೆಟ್ಟಿ ಅವರ ಐತಿಹಾಸಿಕ ಪಯಣ ಬೆಳ್ಳಿ ಪದಕದೊಂದಿಗೆ ಅಂತ್ಯ

ಆಯುಷ್ ಶೆಟ್ಟಿ ಅವರ ಐತಿಹಾಸಿಕ ಪಯಣ ಬೆಳ್ಳಿ ಪದಕದೊಂದಿಗೆ ಅಂತ್ಯ

ಹೈದರಬಾದ್ : ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಉದಯೋನ್ಮುಖ ತಾರೆ ಆಯುಷ್ ಶೆಟ್ಟಿ ಅವರ ಐತಿಹಾಸಿಕ ಪಯಣ ಬೆಳ್ಳಿ ಪದಕದೊಂದಿಗೆ ಅಂತ್ಯಗೊಂಡಿದೆ. ಫೈನಲ್ ಹಣಾಹಣಿಯಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಚೀನಾದ ಶಿ ಯು ಕಿ ವಿರುದ್ಧ 21-8, 21-10 ನೇರ ಸೆಟ್‌ಗಳ ಅಂತರದಲ್ಲಿ ಸೋಲನುಭವಿಸಿದ ಆಯುಷ್, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಸೋಲಿನೊಂದಿಗೆ ಏಷ್ಯಾ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಭಾರತದ ದಶಕಗಳ ಸುದೀರ್ಘ ಕಾಯುವಿಕೆ ಮುಂದುವರಿಯುವಂತಾಗಿದೆ.

​ಈ ಪಂದ್ಯಾವಳಿಯಲ್ಲಿ ಆಯುಷ್ ಶೆಟ್ಟಿ ಅವರ ಪ್ರದರ್ಶನ ಅದ್ಭುತವಾಗಿತ್ತು. 1965ರಲ್ಲಿ ದಿನೇಶ್ ಖನ್ನಾ ಅವರು ಚಿನ್ನದ ಪದಕ ಗೆದ್ದ ನಂತರ, ಈ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಆಯುಷ್ ಪಾತ್ರರಾಗಿದ್ದಾರೆ. 2023ರಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿತ್ತಾದರೂ, ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ 59 ವರ್ಷಗಳ ನಂತರ ಫೈನಲ್ ಪ್ರವೇಶಿಸುವ ಅವಕಾಶ ಲಭಿಸಿತ್ತು.

​ಫೈನಲ್‌ ಹಾದಿಯಲ್ಲಿ ಆಯುಷ್ ಶೆಟ್ಟಿ ವಿಶ್ವದ ದಿಗ್ಗಜ ಆಟಗಾರರಿಗೆ ಆಘಾತ ನೀಡಿದ್ದರು. ವಿಶ್ವದ ನಂಬರ್ 1 ಆಟಗಾರ ಕುನ್ಲಾವುಟ್ ವಿಟಿಡ್ಸರ್ನ್ ಸೇರಿದಂತೆ, ವಿಶ್ವದ 4ನೇ ಶ್ರೇಯಾಂಕಿತ ಜೊನಾಥನ್ ಕ್ರಿಸ್ಟಿ ಮತ್ತು 7ನೇ ಶ್ರೇಯಾಂಕಿತ ಲಿ ಶಿ ಫೆಂಗ್ ಅವರನ್ನು ಮಣಿಸಿ ಪ್ರಶಸ್ತಿಯ ಆಸೆ ಚಿಗುರಿಸಿದ್ದರು. ಇದಕ್ಕೂ ಮೊದಲು ಪ್ಯಾರಿಸ್ ಒಲಿಂಪಿಕ್ ಕಂಚಿನ ಪದಕ ವಿಜೇತ ಲಿ ಝಿ ಜಿಯಾ ಮತ್ತು ಮಾಜಿ ವಿಶ್ವ ಚಾಂಪಿಯನ್ ಲೋ ಕೀನ್ ಯೂ ಅವರಂತಹ ಬಲಿಷ್ಠ ಆಟಗಾರರನ್ನು ಸೋಲಿಸಿದ ಅನುಭವ ಆಯುಷ್ ಅವರ ಬೆನ್ನಿಗಿತ್ತು. ಅಂತಿಮ ಹಂತದಲ್ಲಿ ಪ್ರಶಸ್ತಿ ಕೈತಪ್ಪಿದರೂ, ಆಯುಷ್ ಅವರ ಈ ಸಾಧನೆ ಭಾರತೀಯ ಬ್ಯಾಡ್ಮಿಂಟನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.

Category
ಕರಾವಳಿ ತರಂಗಿಣಿ