ಹೈದರಬಾದ್ : ಚೈನಾದಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಉದಯೋನ್ಮುಖ ಶಟ್ಲರ್ ಆಯುಷ್ ಶೆಟ್ಟಿ ಫೈನಲ್ ತಲುಪುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ರೋಚಕವಾಗಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ, ಥೈಲ್ಯಾಂಡ್‌ನ ಕುನ್ಲಾವುಟ್ ವಿದಿತ್ಸರ್ನ್ ಅವರನ್ನು 10-21, 21-19, 21-17 ಅಂತರದಿಂದ ಸೋಲಿಸುವ ಮೂಲಕ ಆಯುಷ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಗೆಲುವಿನೊಂದಿಗೆ 1965ರ ನಂತರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಏಷ್ಯಾ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ 20 ವರ್ಷದ ಆಯುಷ್ ಪಾತ್ರರಾಗಿದ್ದಾರೆ.
ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಈ ರೋಚಕ ಹಣಾಹಣಿಯಲ್ಲಿ ಆಯುಷ್ ಮೊದಲ ಸೆಟ್ ಅನ್ನು 10-21 ಅಂತರದಿಂದ ಕಳೆದುಕೊಂಡು ಭಾರೀ ಹಿನ್ನಡೆ ಅನುಭವಿಸಿದ್ದರು. ಆರಂಭಿಕ ಸೆಟ್ ಸೋತಾಗ ಅವರ ಹೋರಾಟ ಇಲ್ಲಿಗೆ ಕೊನೆಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ದ್ವಿತೀಯ ಸೆಟ್‌ನಿಂದ ಪುಟಿದೆದ್ದ ಆಯುಷ್ ಅದ್ಭುತ ಕಮ್‌ಬ್ಯಾಕ್ ಮಾಡಿದರು. ಎರಡನೇ ಸೆಟ್‌ನ ಮಧ್ಯಂತರದ ವೇಳೆಗೆ 11-4 ಅಂತರದಿಂದ ಮುನ್ನಡೆ ಸಾಧಿಸಿದ್ದ ಶೆಟ್ಟಿಗೆ ವಿದಿತ್ಸರ್ನ್ ಕಠಿಣ ಪೈಪೋಟಿ ನೀಡಿದರು. ಒಂದು ಹಂತದಲ್ಲಿ ಆಯುಷ್ ಆರು ಗೇಮ್ ಪಾಯಿಂಟ್‌ಗಳನ್ನು ಹೊಂದಿದ್ದರೂ, ಥಾಯ್ ಶಟ್ಲರ್ ಸತತ ಐದು ಪಾಯಿಂಟ್‌ಗಳನ್ನು ಗಳಿಸಿ ಸಮಬಲಕ್ಕೆ ತಂದಿದ್ದರು. ಈ ಹಂತದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿದ ಆಯುಷ್, ಸತತ ನಾಲ್ಕು ಅಂಕಗಳನ್ನು ಕಲೆಹಾಕಿ ಸೆಟ್ ಗೆದ್ದುಕೊಂಡರು.
ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಎದುರಾಳಿಗೆ ಯಾವುದೇ ಅವಕಾಶ ನೀಡದ ಆಯುಷ್, 21-17 ಅಂತರದಿಂದ ಜಯ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇದೀಗ ಪ್ರಶಸ್ತಿಗಾಗಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅವರು ಚೀನಾದ ಶಿ ಯು ಕಿ ಅಥವಾ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರ ಸವಾಲನ್ನು ಎದುರಿಸಲಿದ್ದಾರೆ.