image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಲಿಕಾನ್​ ಸಿಟಿಯಲ್ಲಿ ದೇಶದ ಅತಿದೊಡ್ಡ ಫಿಟ್‌ನೆಸ್ ರೇಸ್ 'ಅಲ್ಟ್ರಾಹ್ಯೂಮನ್ ಹೈರಾಕ್ಸ್' ಕ್ರೀಡಾಕೂಟ

ಸಿಲಿಕಾನ್​ ಸಿಟಿಯಲ್ಲಿ ದೇಶದ ಅತಿದೊಡ್ಡ ಫಿಟ್‌ನೆಸ್ ರೇಸ್ 'ಅಲ್ಟ್ರಾಹ್ಯೂಮನ್ ಹೈರಾಕ್ಸ್' ಕ್ರೀಡಾಕೂಟ

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಫಿಟ್‌ನೆಸ್ ಸಂಭ್ರಮ 'ಅಲ್ಟ್ರಾಹ್ಯೂಮನ್ ಹೈರಾಕ್ಸ್' (HYROX) ಕ್ರೀಡಾಕೂಟಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ. ಏಪ್ರಿಲ್ 11 ಮತ್ತು 12ರಂದು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC) ದಲ್ಲಿ ಈ ರೋಚಕ ಸ್ಪರ್ಧೆ ನಡೆಯಲಿದ್ದು, ನಗರದ ಫಿಟ್‌ನೆಸ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

​ಈ ಬಾರಿಯ ಸ್ಪರ್ಧೆಯ ಪ್ರಮುಖ ಆಕರ್ಷಣೆಯೆಂದರೆ ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಭಾಗವಹಿಸುವಿಕೆ. ಪ್ಯೂಮಾ ರಾಯಭಾರಿಗಳಾಗಿರುವ ಈ ಇಬ್ಬರು ಕ್ರೀಡಾ ಐಕಾನ್‌ಗಳು ಈ ಓಟದಲ್ಲಿ ಪಾಲ್ಗೊಳ್ಳುತ್ತಿರುವುದು ಕ್ರೀಡಾಕೂಟದ ಮೆರುಗನ್ನು ಹೆಚ್ಚಿಸಿದೆ. ಮುಂಬೈ ಮತ್ತು ದೆಹಲಿಯ ಯಶಸ್ವಿ ಆಯೋಜನೆಯ ನಂತರ, ಈ ಜಾಗತಿಕ ರೇಸ್‌ಗೆ ಆತಿಥ್ಯ ವಹಿಸುತ್ತಿರುವ ಭಾರತದ ಮೂರನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.

​ಹೈರಾಕ್ಸ್ ಕ್ರೀಡೆಯು ಓಟ ಮತ್ತು ತೀವ್ರತರವಾದ ದೈಹಿಕ ಕಸರತ್ತುಗಳ ವಿಶಿಷ್ಟ ಸಂಯೋಜನೆಯಾಗಿದೆ. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಒಟ್ಟು 8 ಕಿಲೋಮೀಟರ್ ಓಡಬೇಕಾಗುತ್ತದೆ. ಪ್ರತಿ ಒಂದು ಕಿಲೋಮೀಟರ್ ಓಟದ ನಂತರ ಸ್ಕೀಯರ್ಗ್, ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪಿ ಬ್ರಾಡ್ ಜಂಪ್ಸ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲಂಜೆಸ್ ಮತ್ತು ವಾಲ್ ಬಾಲ್ಸ್ ಎಂಬ ಎಂಟು ವಿವಿಧ ರೀತಿಯ ಫಂಕ್ಷನಲ್ ವರ್ಕ್‌ಔಟ್‌ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

​ಈಗಾಗಲೇ 8,200ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇದೊಂದು ಬೃಹತ್ ಕ್ರೀಡಾ ಹಬ್ಬವಾಗಿ ಮಾರ್ಪಟ್ಟಿದೆ. ಹೈರಾಕ್ಸ್ ಇಂಡಿಯಾ ಮುಖ್ಯಸ್ಥ ದೀಪಕ್ ರಾಜ್ ಮಾತನಾಡಿ, ಬೆಂಗಳೂರಿನ ಸದೃಢ ಫಿಟ್‌ನೆಸ್ ಸಮುದಾಯಕ್ಕೆ ಈ ಕ್ರೀಡೆಯನ್ನು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ. ಪ್ಯೂಮಾ ಇಂಡಿಯಾದ ಮಾರ್ಕೆಟಿಂಗ್ ಮುಖ್ಯಸ್ಥೆ ಶ್ರೇಯಾ ಸಚ್ದೇವ್ ಅವರು ಕೂಡ ಸ್ಟಾರ್ ಕ್ರೀಡಾಪಟುಗಳ ಉಪಸ್ಥಿತಿ ಹೆಚ್ಚಿನ ಜನರನ್ನು ಆಕರ್ಷಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​ಕ್ರೀಡಾಕೂಟದ ವಿಶೇಷ ಭಾಗವಾಗಿ ಭಾನುವಾರ ಸಂಜೆ 4:50ಕ್ಕೆ 'ಬ್ಯಾಟಲ್ ಆಫ್ ದಿ ಜಿಮ್ಸ್' ನಡೆಯಲಿದ್ದು, ದೇಶದ ಪ್ರಮುಖ 26 ಜಿಮ್‌ಗಳ ನಡುವೆ ಪೈಪೋಟಿ ನಡೆಯಲಿದೆ. ಇದರ ನೇರ ಪ್ರಸಾರವನ್ನು 'ಹೈರಾಕ್ಸ್ ಇಂಡಿಯಾ' ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಸಾರ್ವಜನಿಕರಿಗೆ ಬೆಳಿಗ್ಗೆ 6:30ರಿಂದಲೇ ವೀಕ್ಷಣೆಗೆ ಅವಕಾಶವಿದ್ದು, ಟಿಕೆಟ್‌ಗಳು ಅಧಿಕೃತ ವೆಬ್‌ಸೈಟ್ ಹಾಗೂ ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಲಭ್ಯವಿವೆ.

Category
ಕರಾವಳಿ ತರಂಗಿಣಿ