ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಮ್ ಮತ್ತು ಪತ್ರಕರ್ತರೊಬ್ಬರ ನಡುವೆ ನಡೆದ ವಾಗ್ವಾದದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಭಾರತೀಯ ಬ್ಯಾಟಿಂಗ್ ದಂತಕಥೆ ವಿರಾಟ್ ಕೊಹ್ಲಿ ಅವರೊಂದಿಗೆ ತಮ್ಮನ್ನು ಪದೇ ಪದೇ ಹೋಲಿಕೆ ಮಾಡುತ್ತಿರುವುದಕ್ಕೆ ಬಾಬರ್ ಅಜಮ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಿಎಸ್ಎಲ್ನಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧ ನಡೆದ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಮುನ್ನಡೆಸಿದ್ದ ಬಾಬರ್ ಅಜಮ್, 37 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಆಗಿದ್ದರು. 146 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪೇಶಾವರ್ ತಂಡವು ಕೊನೆಯ ಎಸೆತದಲ್ಲಿ ಜಯ ಸಾಧಿಸಿತಾದರೂ, ಉತ್ತಮ ಆರಂಭದ ಹೊರತಾಗಿಯೂ ಪಂದ್ಯವನ್ನು ಮುಗಿಸದೆ ಬಾಬರ್ ಔಟ್ ಆಗಿದ್ದು ಟೀಕಾಕಾರರಿಗೆ ಅಸ್ತ್ರವಾಯಿತು.
ಇದೇ ವಿಚಾರವಾಗಿ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು, "ವಿರಾಟ್ ಕೊಹ್ಲಿ ನಿಮ್ಮಂತೆಯೇ ಆಡುವ ಆಟಗಾರ, ಆದರೆ ಅವರು ಪಂದ್ಯಗಳನ್ನು ಕೊನೆಯವರೆಗೆ ನಿಂತು ಫಿನಿಶ್ ಮಾಡುತ್ತಾರೆ. ನಿಮಗೆ ಆ ಸಾಮರ್ಥ್ಯವಿಲ್ಲವೇ? ಅಭಿಮಾನಿಗಳು ನಿಮ್ಮನ್ನು ಕೊಹ್ಲಿಗೆ ಹೋಲಿಸುವ ಬಗ್ಗೆ ನೀವು ಏನು ಹೇಳುತ್ತೀರಿ?" ಎಂದು ನೇರವಾಗಿ ಪ್ರಶ್ನಿಸಿದರು. ಈ ಪ್ರಶ್ನೆಯಿಂದ ಕೆರಳಿದ ಬಾಬರ್ ಅಜಮ್, "ಇದನ್ನೆಲ್ಲಾ ನಿಲ್ಲಿಸಿ. ಇಂತಹ ವಿಷಯಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಹೋಲಿಕೆಗಳನ್ನು ನಿಲ್ಲಿಸಿ ಮತ್ತು ಮುಂದುವರಿಯಿರಿ. ನಾನು ಪಂದ್ಯಗಳನ್ನು ಫಿನಿಶ್ ಮಾಡುವುದಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ. ನನ್ನ ಬಹುತೇಕ ಗುರಿ ಪಂದ್ಯಗಳನ್ನು ಫಿನಿಶ್ ಮಾಡುವುದೇ ಆಗಿರುತ್ತದೆ. ನಾನು ಹೆಚ್ಚಿನ ಪಂದ್ಯಗಳನ್ನು ಕೊನೆಯವರೆಗೆ ನಿಂತು ಗೆಲ್ಲಿಸಿಕೊಟ್ಟಿದ್ದೇನೆ," ಎಂದು ಕೋಪದಿಂದಲೇ ಉತ್ತರಿಸಿದರು. ಬಾಬರ್ ಅಜಮ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಪಾಕಿಸ್ತಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ ಟಿ20 ಸ್ವರೂಪದಲ್ಲಿ ಅವರ ಪ್ರದರ್ಶನ ಗಮನಾರ್ಹವಾಗಿತ್ತು. ಈ ಕಾರಣದಿಂದಲೇ ಅನೇಕರು ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಲು ಪ್ರಾರಂಭಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಾಬರ್ ಸ್ಥಿರತೆ ಕಳೆದುಕೊಂಡು ಸತತ ವೈಫಲ್ಯ ಅನುಭವಿಸುತ್ತಿರುವುದು ಟೀಕೆಗಳಿಗೆ ಕಾರಣವಾಗಿದೆ. ವಿರಾಟ್ ಕೊಹ್ಲಿಯಂತಹ ಸ್ಥಿರತೆ ಇಲ್ಲದಿದ್ದಾಗ ಅಂತಹ ದೊಡ್ಡ ಆಟಗಾರನಿಗೆ ಹೋಲಿಸುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಹಾಗೂ ಟ್ರೋಲ್‌ಗಳು ನಡೆಯುತ್ತಿವೆ.