ಲುಸಾನ್ : ಕಾಲುಗಳ ನೆರವಿನಿಂದ ಬಾಣ ಪ್ರಯೋಗಿಸುವ ಭಾರತದ ಶೀತಲ್ ದೇವಿ ಅವರನ್ನು ವಿಶ್ವ ಆರ್ಚರಿ ಸಂಸ್ಥೆಯು '2025ರ ವರ್ಷದ ಪ್ಯಾರಾ ಆರ್ಚರ್' ಗೌರವಕ್ಕೆ ಆಯ್ಕೆ ಮಾಡಿದೆ. 19 ವರ್ಷ ವಯಸ್ಸಿನ ಜಮ್ಮು-ಕಾಶ್ಮೀರದ ಪ್ರತಿಭಾನ್ವಿತ ಬಿಲ್ಗಾತಿಯ ಅಸಾಧಾರಣ ಸಾಧನೆಗಳ ಪಟ್ಟಿಗೆ ಹೊಸದಾಗಿ ಈ ಗೌರವ ಸೇರ್ಪಡೆಯಾಗಿದೆ. ಕೈಗಳಿಲ್ಲದೇ ಜನಿಸಿದ್ದ ಅವರಿಗೆ ಪಾದ, ಕಾಲುಗಳು ಮತ್ತು ಭುಜದ ನೆರವು ಪಡೆದು ಬಾಣ ಪ್ರಯೋಗಿಸುವ ಕೌಶಲ ಸಿದ್ಧಿಸಿದೆ. ದಕ್ಷಿಣ ಕೊರಿಯಾದ ಗ್ವಾಂಗ್‌ಝುನಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಅವರು ಮಹಿಳೆಯರ ವಿಭಾಗದ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದ್ದರು. ಕಾಂಪೌಂಡ್ ಆರ್ಚರಿಯ ಬಿಲ್ಲು ಆಧುನಿಕ ರೀತಿಯದಾಗಿದ್ದು, ಸಣ್ಣ ರಾಟೆ, ಕೇಬಲ್‌ಗಳನ್ನು, ರಿಕರ್ವ್‌ಗಿಂತ ವೇಗ, ನಿಖರತೆ ಹೊಂದಿದೆ. ಗ್ವಾಂಗ್‌ಝುನಲ್ಲಿ ಅವರು ಚಿನ್ನದ ಜೊತೆ ಮಹಿಳಾ ತಂಡ ವಿಭಾಗದ ಬೆಳ್ಳಿ ಮತ್ತು ಮಿಶ್ರ ತಂಡ ವಿಭಾಗದ ಕಂಚು ಗೆದ್ದರು. 'ಭಾರತದ ಶೀತಲ್ ದೇವಿ ಅವರು ವಿಶ್ವ ಕಿರೀಟದ ಜೊತೆ ಕಳೆದ ಸಾಲಿನಲ್ಲಿ ತೋರಿದ ಅಮೋಘ ಸಾಧನೆಗಾಗಿ ವರ್ಷದ ಪ್ಯಾರಾ ಆರ್ಚರ್ ಗೌರವಕ್ಕೆ ಪಾತ್ರರಾಗಿದ್ದಾರೆ' ಎಂದು ವಿಶ್ವ ಆರ್ಚರಿ ತಿಳಿಸಿದೆ.
'ವಿಶ್ವದ ಶ್ರೇಷ್ಠ ಪ್ಯಾರಾ ಆರ್ಚರಿ ಸ್ಪರ್ಧಿಗಳೊಂದಿಗೆ ನಾಮ ನಿರ್ದೇಶನ... ಈಗ ಶ್ರೇಷ್ಠ ಪ್ಯಾರಾ ಆರ್ಚರ್ ಗೌರವಕ್ಕೆ ಆಯ್ಕೆ. ಹೃದಯ ತುಂಬಿಬಂದಿದೆ. ಧನ್ಯವಾದಗಳು' ಎಂದು ಶೀತಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಯಾ ವರ್ಷ ಅತ್ಯುತ್ತಮ ಸಾಧನೆ ತೋರುವ ಆರ್ಚರಿ ಸ್ಪರ್ಧಿಗಳನ್ನು ಗೌರವಿಸುವ ಈ ಪ್ರಶಸ್ತಿಗಳನ್ನು 2011ರಲ್ಲಿ ಆರಂಭಿಸಲಾಗಿತ್ತು. ಈ ವರ್ಷ ಎಂಟು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. 'ವರ್ಷದ ಶ್ರೇಷ್ಠ ಆರ್ಚರ್' (ಟರ್ಕಿಯ ಎಮಿರ್ಕನ್ ಹ್ಯಾನಿ), 'ವರ್ಷದ ಉದಯೋನ್ಮುಖ ಆರ್ಚರ್' (ಫ್ರಾನ್ಸ್‌ನ ಬ್ಯಾಪ್ಟಿಸ್ಟ್ ಅಡಿಸ್), ವರ್ಷದ ಶ್ರೇಷ್ಠ ತಂಡ (ಕೊರಿಯಾದ ಪುರುಷರ ರಿಕರ್ವ್ ತಂಡ) ಗೌರವಗಳು ಇವುಗಳಲ್ಲಿ ಒಳಗೊಂಡಿವೆ.