ನವದೆಹಲಿ : ಭಾರತದ ಮಿಡ್‌ಫೀಲ್ಡ್ ಆಟಗಾರ ಹಾರ್ದಿಕ್ ಸಿಂಗ್ ಮತ್ತು ಮಹಿಳಾ ತಂಡದ ಫಾರ್ವರ್ಡ್ ನವನೀತ್ ಕೌರ್ ಅವರು ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕ್ರಮವಾಗಿ 'ವರ್ಷದ ಅತ್ಯುತ್ತಮ ಆಟಗಾರ' ಮತ್ತು 'ವರ್ಷದ ಅತ್ಯುತ್ತಮ ಆಟಗಾರ್ತಿ' ಪ್ರಶಸ್ತಿಗೆ ಪಾತ್ರರಾದರು. ಒಂದು ವರ್ಷದ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಹಾಗೂ ಆಟಗಾರ್ತಿಯರನ್ನು ಶುಕ್ರವಾರ ಸಂಜೆ ರಾಜಧಾನಿಯಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆದ ವರ್ಣರಂಜಿತ ಸಮಾರಂಭದಲ್ಲಿ ಗೌರವಿಸಲಾಯಿತು.
ಭಾರತ ತಂಡದ ಮಾಜಿ ನಾಯಕ ಹಾಗೂ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ತಂಡದ ಆಟಗಾರರಾಗಿದ್ದ ಜಾಫರ್ ಇಕ್ಬಾಲ್ ಅವರಿಗೆ ಮೇಜರ್ ಧ್ಯಾನಚಂದ್ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಕ್ಬಾಲ್ ಅವರು 1978 ಮತ್ತ 1982ರಲ್ಲಿ ಬೆಳ್ಳಿ ಪದಕ ಗೆದ್ದ ಏಷ್ಯನ್ ಗೇಮ್ಸ್ ತಂಡದಲ್ಲೂ ಆಡಿದ್ದರು. ಹಾರ್ದಿಕ್ ಮತ್ತು ನವನೀತ್ ಅವರಿಗೆ ಬಲಬೀರ್ ಸಿಂಗ್ ಸೀನಿಯರ್ ಹೆಸರಿನಲ್ಲಿ ಕ್ರಮವಾಗಿ 2025ರ ವರ್ಷದ ಆಟಗಾರ ಮತ್ತು ವರ್ಷದ ಆಟಗಾರ್ತಿ ಗೌರವ ನೀಡಲಾಯಿತು. ಈ ಪ್ರಶಸ್ತಿಯು ತಲಾ ₹20 ಲಕ್ಷ ನಗದು ಹೊಂದಿದೆ. ವರ್ಷದ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಮಹಿಳಾ ತಂಡದ ಬಿಚುದೇವಿ ಖರಿಬಮ್ ಅವರಿಗೆ ಪ್ರದಾನ ಮಾಡಲಾಯಿತು. ವರ್ಷದ ಶ್ರೇಷ್ಠ ರಕ್ಷಣೆ ಆಟಗಾರನಿಗೆ ನೀಡುವ ಪರ್ಗತ್ ಸಿಂಗ್ ಪ್ರಶಸ್ತಿ ಸಂಜಯ್ ಅವರ ಪಾಲಾಯಿತು. ಈ ಪ್ರಶಸ್ತಿಗಳು ತಲಾ ₹5 ಲಕ್ಷ ಬಹುಮಾನ ಹೊಂದಿವೆ.