image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೊರಾಂಟೋದಲ್ಲಿ ಎದ್ದಿತ್ತು ದಾದಾ ಸುನಾಮಿ: ರಮೀಜ್ ರಾಜಾ ವೃತ್ತಿಜೀವನಕ್ಕೆ ಅಂದು ಗಂಗೂಲಿ ಇಟ್ಟಿದ್ದೇ ಕೊನೆಯ ತಿಲಕ!

ಟೊರಾಂಟೋದಲ್ಲಿ ಎದ್ದಿತ್ತು ದಾದಾ ಸುನಾಮಿ: ರಮೀಜ್ ರಾಜಾ ವೃತ್ತಿಜೀವನಕ್ಕೆ ಅಂದು ಗಂಗೂಲಿ ಇಟ್ಟಿದ್ದೇ ಕೊನೆಯ ತಿಲಕ!

ಮಂಗಳೂರು:1997ರ ಸಹಾರಾ ಕಪ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮಾಸದ ಒಂದು ಅಸ್ಮರಣೀಯ ಅಧ್ಯಾಯ. ಕೆನಡಾದ ಟೊರಾಂಟೋ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಆ ಸರಣಿಯು ಸೌರವ್ ಗಂಗೂಲಿ ಎಂಬ ಪ್ರತಿಭೆಯ ಅಸಲಿ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಅಂದು ಮೈದಾನದಲ್ಲಿ ಗಂಗೂಲಿ ಎನ್ನುವ ಸುನಾಮಿ ಎದ್ದಾಗ ಪಾಕಿಸ್ತಾನದ ಬಲಿಷ್ಠ ಪಡೆ ದಿಕ್ಕಾಪಾಲಾಗಿತ್ತು. ಅದು ಕೇವಲ ಒಂದು ಸೋಲಲ್ಲ, ಬದಲಿಗೆ ಪಾಕಿಸ್ತಾನಕ್ಕೆ ಎದುರಾದ ದೊಡ್ಡ ಅವಮಾನದ ಸರಣಿಯಾಗಿತ್ತು. ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದ ಗಂಗೂಲಿ, ಚೆಂಡು ಹಿಡಿದು ದಾಳಿಗಿಳಿದಾಗ ಪಾಕ್ ನಾಯಕ ರಮೀಜ್ ರಾಜಾ ಸೇರಿದಂತೆ ದಿಗ್ಗಜ ಬ್ಯಾಟರ್‌ಗಳ ವಿಕೆಟ್ ಕಿತ್ತು ಮಕಾಡೆ ಮಲಗಿಸಿದ್ದರು.
​ಪಿಚ್ ಬೌಲರ್‌ಗಳಿಗೆ ಪೂರಕವಾಗಿದ್ದ ಆ ದಿನಗಳಲ್ಲಿ ಗಂಗೂಲಿ ಕೇವಲ ಪಾರ್ಟ್-ಟೈಮ್ ಬೌಲರ್ ಆಗಿ ಉಳಿಯದೆ, ಒಬ್ಬ ಸ್ಪೆಷಲಿಸ್ಟ್ ಬೌಲರ್‌ನಂತೆ ಚೆಂಡನ್ನು ಎರಡು ಕಡೆ ಸ್ವಿಂಗ್ ಮಾಡುತ್ತಿದ್ದರು. ವಿಶೇಷವಾಗಿ ಸೆಪ್ಟೆಂಬರ್ 21, 1997ರಂದು ನಡೆದ ಸರಣಿಯ 5ನೇ ಪಂದ್ಯದಲ್ಲಿ ಪಾಕಿಸ್ತಾನ ಗುರಿ ಬೆನ್ನಟ್ಟುತ್ತಿದ್ದಾಗ ಗಂಗೂಲಿ ಎಸೆದ ಆ ಒಂದು 'ಮ್ಯಾಜಿಕಲ್' ಎಸೆತ ಇಂದಿಗೂ ಕ್ರಿಕೆಟ್ ಪ್ರೇಮಿಗಳ ಕಣ್ಣಮುಂದಿದೆ. ಕ್ರೀಸ್‌ನಲ್ಲಿದ್ದ ರಮೀಜ್ ರಾಜಾ ಅವರನ್ನು ಗುರಿಯಾಗಿಸಿ ಗಂಗೂಲಿ ಎಸೆದ ಚೆಂಡು ಲಘುವಾಗಿ ಹೊರಕ್ಕೆ ಸ್ವಿಂಗ್ ಆಯಿತು. ಅದನ್ನು ಡಿಫೆಂಡ್ ಮಾಡಲು ಹೋದ ರಾಜಾ ಬ್ಯಾಟ್ ಎಡ್ಜ್ ಕೊಟ್ಟರು, ವಿಕೆಟ್ ಕೀಪರ್ ಸಬಾ ಕರೀಮ್ ಕೈಗೆ ಚೆಂಡು ತಲುಪುತ್ತಿದ್ದಂತೆ ಇಡೀ ಪಾಕಿಸ್ತಾನದ ಪಾಳಯವೇ ಮಂಕಾಗಿತ್ತು.
​ಆ ಪಂದ್ಯದಲ್ಲಿ 10 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 2 ವಿಕೆಟ್ ಪಡೆದ ಗಂಗೂಲಿ, ಪಾಕಿಸ್ತಾನದ ನಾಯಕ ರಮೀಜ್ ರಾಜಾ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಆ ಮೂಲಕ ಕೊನೆಯ ತಿಲಕ ಹಚ್ಚಿದ್ದರು. ಇಂದು ಕ್ರಿಕೆಟ್ ಲೋಕಕ್ಕೆ ಎಷ್ಟೇ ಸ್ಟಾರ್ ಆಟಗಾರರು ಬಂದಿರಬಹುದು, ಆದರೆ ಅಂದು ಕಡು ವೈರಿಗಳ ಎದುರು ಎದೆಯುಬ್ಬಿಸಿ ನಿಂತಿದ್ದ ದಾದಾ ಅವರ ಆ ಫೈಟಿಂಗ್ ಸ್ಪಿರಿಟ್ ಮತ್ತು ಹೋರಾಟದ ಮನೋಭಾವ ಇಂದಿಗೂ ಅತ್ಯಂತ ವಿಶೇಷವಾದುದು.

Category
ಕರಾವಳಿ ತರಂಗಿಣಿ