ಉತ್ತರ ಪ್ರದೇಶ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿದೆ. ಮಳೆಪೀಡಿತ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿರುವ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿತು.
ಈ ಸರಣಿಯಲ್ಲಿ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಬರೆದಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಗಳನ್ನು ಪಡೆದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದರ ಜೊತೆಗೆ ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಸರಿಗಟ್ಟಿದ್ದಾರೆ.
ಮುರಳೀಧರನ್ 60 ಟೆಸ್ಟ್ ಸರಣಿಗಳಲ್ಲಿ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಅಶ್ವಿನ್ 39 ಟೆಸ್ಟ್ ಸರಣಿಗಳಲ್ಲಿ 11 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅಶ್ವಿನ್ ಪ್ರಸ್ತುತ ಸಕ್ರಿಯ ಆಟಗಾರರಾಗಿದ್ದು ಭಾರತ ತಂಡದಲ್ಲಿ ನಿರಂತರವಾಗಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ. ಭವಿಷ್ಯದಲ್ಲಿ ಮುರಳೀಧರನ್ ಅವರನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ.
ಪ್ರಸಕ್ತ ಸರಣಿಯಲ್ಲಿ ಅಶ್ವಿನ್ ಬ್ಯಾಟಿಂಗ್ನಲ್ಲಿ ಶತಕ ಗಳಿಸಿದ್ದು, ಬೌಲಿಂಗ್ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಶತಕದ ಜೊತೆಗೆ ಇನ್ನಿಂಗ್ಸ್ ಒಂದರಲ್ಲೇ 6 ವಿಕೆಟ್ ಉರುಳಿಸಿದ್ದರು. ನಂತರ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಅಶ್ವಿನ್ 5,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.